ಹುಬ್ಬಳ್ಳಿ ಗೋಕುಲ ರೋಡ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕಳ್ಳತನ ಪ್ರಕರಣವೊಂದನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನ ಮಾಡಿದ್ದ ಚಿನ್ನ ಹಾಗೂ ಬೆಳ್ಳಿ ವಸ್ತುಗಳ ಸಮೇತ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಾಳ್ವೇಕರ ಪ್ಲಾಟ್ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ ರೋಡ್ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಕುಂದಗೋಳ ತಾಲೂಕಿನ ಹೊಸ ಹಂಚಿನಾಳ ಗ್ರಾಮದ ನಿವಾಸಿ, ಹಾಲಿ ಕೇಶ್ವಾಪುರದ ರಾಮನಗರ ದರ್ಗಾ ಹತ್ತಿರ ವಾಸವಿದ್ದ 20 ವರ್ಷದ ಅಜಯ ತಂದೆ ತೋಟೆಪ್ಪ ಬಂಡಿವಾಡ ಬಂಧಿತ ಆರೋಪಿ. ನವೆಂಬರ್ 10 ರಂದು ಗೋಕುಲ ರೋಡ್ನ ಅಕ್ಷಯ ಪಾರ್ಕ್ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ವಾಳ್ವೇಕರ ಪ್ಲಾಟ್ನಲ್ಲಿ ಕಳ್ಳತನ ಮಾಡಿದ್ದ 33 ಗ್ರಾಂ ತೂಕದ ಬಂಗಾರ ಹಾಗೂ 2 ಕೆ.ಜಿ ತೂಕದ ಬೆಳ್ಳಿ ವಸ್ತುಗಳನ್ನು ಕಪಟತನದಿಂದ ಸಂಪಾದಿಸಿ ತನ್ನ ಬಳಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಈ ಸಂಬಂಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪೊಲೀಸ್ ಆಯುಕ್ತರಾದ ಬೋರಸೆ ಭೂಷಣ್ ಗುಲಾಬರಾವ್ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗೋಕುಲ ರೋಡ್ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ, ಪಿಎಸ್ಐ ಸಚಿನಕುಮಾರ ದಾಸರಡ್ಡಿ ಹಾಗೂ ಸಿಸಿಬಿ ಸಿಬ್ಬಂದಿಗಳ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಸಿಬ್ಬಂದಿಗಳ ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
Hubli News Latest Kannada News