ಹುಬ್ಬಳ್ಳಿ : ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕು ನಿರ್ವಹಣೆಗೆ ಸರ್ಕಾರ ಸರಿಯಾಗಿ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ರಾಜ್ಯದಲ್ಲಿ ಆಕ್ಸಿಜನ್ ಬೆಡ್, ಐಸಿಯು ಬೆಡ್‍ಗಳು ಸಿಗದೆ ಸೋಂಕಿತರು ಪರದಾಡುವಂತಾಗಿದೆ. ಇದರಿಂದ ಸಾವುನೋವುಗಳು ಹೆಚ್ಚಾಗಿವೆ. ಇನ್ನೂ ಹೆಚ್ಚುತ್ತಲೇ ಇವೆ. ಯಾವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೋ ಆ ವ್ಯವಸ್ಥೆಯನ್ನೇ ಸರಿಯಾಗಿ ಮಾಡಿಲ್ಲ ಎಂದು ಸರ್ಕಾರವನ್ನು ದೂರಿದರು.
ಚಾಮರಾಜನಗರದ ಸಾವಿನ ಅಂಕಿ ಸಂಖ್ಯೆಯಲ್ಲಿ ಮೊದಲು ಸುಳ್ಳು ಹೇಳಿದ್ದಾರೆ. ಸಂಬಂಧಪಟ್ಟ ಸಚಿವರು ಏಕೆ ಸುಳ್ಳು ಹೇಳಿದರು ಎಂದು ಪ್ರಶ್ನಿಸಿದ ಅವರು, ಎಲ್ಲ ಕಡೆಗಳಲ್ಲಿನ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಸಿಎಂ ಕುರ್ಚಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವ್ಯಯಕ್ತಿಕವಾಗಿ ನನಗೆ ಪ್ರೀತಿ ಇದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕೆಲಸ ನಿರ್ವಹಿಸಲು ಅವರು ವಿಫಲರಾಗಿದ್ದಾರೆ. ಬಿಜೆಪಿಯಲ್ಲಿ ಬೀದಿ ಕಾಳಗ ನಡೆಯುತ್ತಿದೆ. ಯೋಗೇಶ್ವರ ಲೂಟಿ ಹೊಡೆಯುವ ಖಾತೆ ಕೇಳುತ್ತಿದ್ದಾರೆ. ಇದನ್ನು ಬಿಜೆಪಿ ಶಾಸಕರೇ ಹೆಳ್ಳುತ್ತಿದ್ದಾರೆ. ನಾಯಕತ್ವ ಬದಲಾವಣೆ ನಂತರ ಸರ್ಕಾರ ಪತನವಾಗುವುದಿಲ್ಲ. ಆದರೆ ಮುಖ್ಯಮಂತ್ರಿಯಾಗುವ ಸಮರ್ಥ ವ್ಯಕ್ತಿ ಬಿಜೆಪಿಯಲ್ಲಿ ಯಾರೂ ಇಲ್ಲ ಎಂದರು.
ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವರು ರಮೇಶ್ ಜಾರಕಿಹೊಳಿಯನ್ನು ರಕ್ಷಣೆ ಮಾಡುತ್ತಿದ್ದಾರೆ. ಒಬ್ಬ ಆರೋಪಿ ಗೃಹ ಸಚಿವರನ್ನು ಭೇಟಿ ಮಾಡುತ್ತಿದ್ದಾರೆ ಎಂದರೆ ಏನು ಅರ್ಥ? ಎಂದು ಪ್ರಶ್ನಿಸಿದರಲ್ಲದೆ, ಗೃಹ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.