ಹುಬ್ಬಳ್ಳಿ : ಆಮ್ ಆದ್ಮಿ ಪಕ್ಷ ಸ್ವಚ್ಛ ರಾಜಕಾರಣಕ್ಕಾಗಿ ಸ್ಥಾಪನೆಯಾದ ಪಕ್ಷ, ಹಣ ಬಲ, ತೋಳಬಲ ತಿರಸ್ಕಾರ ಮಾಡಿ ಸಾಮಾನ್ಯ ಜನರು ಅಧಿಕಾರ ಹೊಂದುವ ಉದ್ದೇಶದಿಂದ ಸ್ವಚ್ಛ ರಾಜಕಾರಣಕ್ಕೆ ಸ್ವಚ್ಛ ಹಣ ಎಂಬ ಯೋಜನೆ ಮೂಲಕ ಸಾರ್ವಜನಿಕರಿಂದ ದೇಣಿಗೆಗೆ ಕರೆ ಕೊಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಷ್ಟ್ರ ಮತ್ತು ರಾಜ್ಯದಲ್ಲಿ ಎಲ್ಲ ಸರ್ಕಾರಗಳು ಕ್ರೋನಿ ಕ್ಯಾಪಿಟಲ್ ಬಂಡವಾಳ ಶಾಹಿಗಳ ಕೈಗೆ ಸಿಕ್ಕು ಅವರ ಪರವಾಗಿ ನೀತಿ ನಿಯಮಗಳನ್ನು ರೂಪಿಸುತ್ತಿವೆ. ಅಲ್ಲದೇ ಪ್ರತಿಯೊಂದು ಗುತ್ತಿಗೆ ಕಾಮಗಾರಿಯಲ್ಲಿ ಹೆಚ್ಚಿನ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಗುತ್ತಿಗೆದಾರ ಒಂದು ಕಾಮಗಾರಿಗೆ ಶೇ.37 ರಷ್ಟು ಹಣವನ್ನು ಅಧಿಕಾರಿಗಳಿಂದ ಹಿಡಿದು ಮಂತ್ರಿಗಳವರೆಗೆ ಭ್ರಷ್ಟದ ಹಣವನ್ನು ಕೊಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಆಮ್ ಆದ್ಮಿ ಪಕ್ಷ ಜನರಿಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಚುನಾವಣೆ ಎದುರಿಸುತ್ತಿದೆ. ಇದಕ್ಕೆ ಸಾರ್ವಜನಿಕರು ತಮ್ಮ ಕೈಯಲ್ಲಿ ಆದಷ್ಟು ಹಣವನ್ನು ಪಕ್ಷದ ಪೋರ್ಟಲ್ ಮಾಡುವ ಮೂಲಕ ಹಣವನ್ನು ನೀಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಮೊಬೈಲ್ ಸಂಖ್ಯೆ 9945561803 ಗೆ ಕರೆ ಮಾಡಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಬಸವರಾಜ ಮುದ್ದಿಗೌಡರ, ಶ್ಯಾಮ ನರಗುಂದ, ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮುಖಂಡರಾದ ಶಾರದಾ ಬಡಿಗೇರ, ವಿದ್ಯಾ ನಾಡಿಗೇರ, ಪಶ್ಚಿಮ ವಿಧಾನಸಭಾ ಕ್ಷೇತ್ರದ ಮುಖಂಡರಾದ ಮಮತಾ ಅಕ್ಕಸಾಲಿ ಇದ್ದರು.