ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಕೊಡುವ ಪೋಷಕರೇ ಹುಷಾರ್! ನಿಮ್ಮ ಅಜಾಗರೂಕತೆ ನಿಮಗೆ ಭಾರೀ ದಂಡದ ಬಿಸಿ ಮುಟ್ಟಿಸಬಹುದು. ಹುಬ್ಬಳ್ಳಿಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕನೊಬ್ಬನಿಗೆ ಬೈಕ್ ಚಲಾಯಿಸಲು ಅವಕಾಶ ನೀಡಿದ್ದ ಪೋಷಕರಿಗೆ ನ್ಯಾಯಾಲಯ ಬರೋಬ್ಬರಿ ₹25,000 ದಂಡ ವಿಧಿಸಿದೆ.

ದಿನಾಂಕ 04.11.2026 ರಂದು ಹುಬ್ಬಳ್ಳಿಯ ವಿದ್ಯಾನಗರದ ಸಾರ್ವಜನಿಕ ರಸ್ತೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿರುವುದು ಕಂಡುಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸರು, ಬಾಲಕನ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ, ಆತನ ಬಳಿಯಿದ್ದ ಬೈಕ್ ಅನ್ನು ಜಪ್ತಿ ಮಾಡಿದ್ದರು.
ಬಳಿಕ ಪೋಷಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಸಲುವಾಗಿ ಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಕೋರ್ಟ್ ನೋಟಿಸ್ ಜಾರಿಗೊಳಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಬಾಲಕನ ಪೋಷಕರಿಗೆ ₹25,000/- ದಂಡ ವಿಧಿಸಿ ಆದೇಶಿಸಿದೆ.
Hubli News Latest Kannada News