ಹುಬ್ಬಳ್ಳಿ : ಭ್ರಷ್ಟಾಚಾರ ಆರೋಪದ ಹೊತ್ತಿರುವ ಸಚಿವೆ ಶಶಿಕಲಾ ಜೊಲ್ಲೆ ಕೂಡಲೇ ಸಚಿವ ಸ್ಥಾನದಿಂದ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮೊಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಮಹಿಳಾ ಕಾರ್ಯಕರ್ತರು, ಸರ್ಕಾರ ‘ದಿನಕ್ಕೊಂದು ಭ್ರಷ್ಟಾಚಾರ’ ಯೋಜನೆ ಹಾಕಿಕೊಂಡಿದ್ದರ ಭಾಗವಾಗಿ ಈಗ ಸಚಿವೆ ಶಶಿಕಲಾ ಜೊಲ್ಲೆಯವರ ಮೊಟ್ಟೆ ಟೆಂಡರ್ ಕಿಕ್ ಬ್ಯಾಕ್ ಬೇಡಿಕೆ ಇಡುವ ಹಗರಣ ಬಯಲಾಗಿದೆ. ಸಚಿವೆ ಶಶಿಕಲಾ ಜೊಲ್ಲೆ ಮಾತೃಪೂರ್ಣ ಯೋಜನೆಯಡಿಯಲ್ಲಿ ಮೊಟ್ಟೆ ವಿತರಿಸುವ ಟೆಂಡರ್ ಹಂಚಿಕೆಯಲ್ಲಿ ಲಂಚದ ಆಮಿಷವೊಡ್ಡಿದ ಅಂಶ ಬೆಳಕಿಗೆ ಬಂದಿದೆ. ಅದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಮೂಲಕ ಗರ್ಭಿಣಿಯರು, ಅಪೌಷ್ಟಿಕ ಮಕ್ಕಳು ಹಾಗೂ ಬಾಣಂತಿಯವರಿಗೆ ಮೊಟ್ಟೆ ವಿತರಣೆ ಟೆಂಡರ್ ನಲ್ಲಿ ಕೋಟಿ ಕೋಟಿ ಹಣದ ಬೇಡಿಕೆ ಇಟ್ಟಿರುವ ನಾಚಿಕೆ ಗೇಡಿನ ಕೆಲಸ. ಸರ್ಕಾರಕ್ಕೆ ಸ್ವಲ್ಪವಾದರೂ ಮರ್ಯಾದೆ ಇದ್ದರೆ ಕೂಡಲೇ ಅವರ ರಾಜೀನಾಮೆ ಪಡೆದು, ಹಗರಣವನ್ನು ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು. ಇಲ್ಲವಾದರೇ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.