ಹುಬ್ಬಳ್ಳಿ : ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಎಲ್ ಆ್ಯಂಡ್ ಟಿ ಕಂಪನಿಯ ಸಿ.ಎಸ್.ಆರ್. ಅನುದಾನದಡಿ ನಿರ್ಮಾಣವಾದ ಆಮ್ಲಜನಕ ಉತ್ಪಾದನಾ ಘಟಕವನ್ನು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು. ಇದೇ ವೇಳೆ ಆಸ್ಪತ್ರೆಯಲ್ಲಿ ಕೋವಿಡ್ ತುರ್ತು ಚಿಕಿತ್ಸೆಗೆ ನೆರವಾಗಲೆಂದು ನೀಡಿದ 9 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಲಾಯಿತು.
ಒಂದು ಸಾವಿರ ಎಲ್.ಪಿ.ಎಮ್ ಸಾಮರ್ಥ್ಯದ ಪಿ.ಎಸ್.ಎ ( Pressure Swing Adsorption ) ತಂತ್ರಜ್ಞಾನದ ಈ ಯಂತ್ರವನ್ನು ಟರ್ಕಿ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಇದು ಪರಿಸರ ಸ್ನೇಹಿ, ಶುದ್ಧ ಹಾಗೂ ಸುರಕ್ಷಿತ ತಂತ್ರಜ್ಞಾನವಾಗಿದ್ದು, ನೈಸರ್ಗಿಕ ಗಾಳಿಯನ್ನು ಉಪಯೋಗಿಸಿಕೊಂಡು ಸ್ಥಳದಲ್ಲಿಯೇ ಆಮ್ಲಜನಕ ಉತ್ಪಾದಿಸುತ್ತದೆ. ಇದರಿಂದ ಆಸ್ಪತ್ರೆಗೆ ಅಗತ್ಯವಿರುವ ಆಕ್ಸಿಜನ್ ಪೂರೈಕೆಯಾಗಲಿದೆ.
ಈ ಸಂದರ್ಭದಲ್ಲಿ ಶಾಸಕರಾದ ಪ್ರದೀಪ್ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.