ಹುಬ್ಬಳ್ಳಿ: ಮುಂಗಾರು ಬಿತ್ತನೆ ಆರಂಭವಾದ ಹಿನ್ನೆಲೆಯಲ್ಲಿ ಬೀಜ, ಗೊಬ್ಬರ ಸಮರ್ಪಕ ವಿತರಣೆ ಹಾಗೂ ಕ್ಷೇತ್ರದ ರೈತರ ಸಮಸ್ಯೆ ಹಾಗೂ ಇನ್ನಿತರೆ ಬೇಡಿಕೆ, ಕುಂದುಕೊರತೆ ಆಲಿಸಲು ಶಾಸಕ ಪ್ರಸಾದ ಅಬ್ಬಯ್ಯ ಅವರು ಶನಿವಾರ ಬಂಕಾಪುರ ಚೌಕ್ ಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಕಲಿ ಬೀಜಗಳ ಹಾವಳಿ ತಡೆ ಹಾಗೂ ಡಿ.ಎ.ಪಿ. ಗೊಬ್ಬರ ಸಮರ್ಪಕ ವಿತರಣೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಇತ್ತೀಚಿಗೆ ಧಾರವಾಡದಲ್ಲಿ ನಡೆದ ಕೃಷಿ ಸಚಿವರೊಂದಿಗಿನ ಸಭೆಯಲ್ಲಿ ಚರ್ಚಿಸಿದ್ದು, ಇದೀಗ ಆ ಎಲ್ಲ ಸಮಸ್ಯೆಗಳು ನಿವಾರಣೆಯಾಗಿವೆ. ಇನ್ನಿತರೆ ಸಮಸ್ಯೆಗಳಿದ್ದರೆ ಅಧಿಕಾರಿಗಳ ಜೊತೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ರೈತ ಸಂಘದ ಅಧ್ಯಕ್ಷ ಚನ್ನಬಸಪ್ಪ ಅಸುಂಡಿ ಮಾತನಾಡಿ, ಈಗಾಗಲೇ ಮುಂಗಾರು ಬಿತ್ತನೆ ಆರಂಭವಾಗಿದ್ದು, ಕೆಲ ರೈತರಿಗೆ ಹೆಚ್ಚುವರಿ ಬೀಜ ಹಾಗೂ ಗೊಬ್ಬರದ ಅವಶ್ಯಕತೆಯಿದೆ. ಇದನ್ನು ಒದಗಿಸಿಕೊಡುವಂತೆ ಕೋರಿಕೊಂಡರು.
ಕೂಡಲೇ ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿ ಹೆಚ್ಚುವರಿ ಬೀಜ, ಗೊಬ್ಬರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸೋಯಾಬೀನ್ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಉಪಾಧ್ಯಕ್ಷ ಗುರುಸಿದ್ದಪ್ಪ ಕಟಗಿ, ಸದಸ್ಯರಾದ ಫಕ್ಕೀರಪ್ಪ ಕಲ್ಲಣ್ಣವರ, ಪರುತಪ್ಪ ಬಳಗಣ್ಣವರ, ಸಿದ್ದಪ್ಪ ಮುತ್ತಣ್ಣವರ, ಸಿದ್ದಪ್ಪ ಮೇಟಿ, ಸಿದ್ದಪ್ಪ ಮೀಶಿ, ಫಕ್ಕೀರಗೌಡ ಪಾಟೀಲ್, ಈರಣ್ಣ ಶಿಂತ್ರಿ, ಮೋಹನ ಅಸುಂಡಿ, ವಿಜನಗೌಡ ಪಾಟೀಲ, ವಿರುಪಾಕ್ಷಯ್ಯ ಜಂಗಮಗೌಡ್ರ, ಇತರರು ಇದ್ದರು.