Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಗ್ರಾಮೀಣ ಭಾಗದಲ್ಲಿ ಕೋವಿಡ್ ನಿರ್ವಹಣೆಗೆ ಹೆಚ್ಚಿನ ಆದ್ಯತೆ : ಸಚಿವ ಜಗದೀಶ್ ಶೆಟ್ಟರ್

ಗ್ರಾಮೀಣ ಭಾಗದಲ್ಲಿ ಕೋವಿಡ್ ನಿರ್ವಹಣೆಗೆ ಹೆಚ್ಚಿನ ಆದ್ಯತೆ : ಸಚಿವ ಜಗದೀಶ್ ಶೆಟ್ಟರ್

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 66 ಕೋವಿಡ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಇದರಲ್ಲಿ 11 ನಗರ ಪ್ರದೇಶ ಹಾಗೂ 55 ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಒಟ್ಟು 2133 ಬೆಡ್‌ಗಳನ್ನು ಗ್ರಾಮೀಣ ಭಾಗದ ಕೋವಿಡ್ ಸೆಂಟರ್‌ಗಳಲ್ಲಿ ನಿರ್ಮಿಸಲಾಗಿದೆ. ಸದ್ಯ ಇದರಲ್ಲಿ 633 ಕೋವಿಡ್ ಸೋಂಕಿತರನ್ನು‌ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ ಜಿಲ್ಲೆ ಹಾಗೂ ರಾಜ್ಯದ ಗ್ರಾಮೀಣ ಭಾಗದಲ್ಲಿ ಕೋವಿಡ್ ನಿರ್ವಹಣೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ‌ ಚಾಲನೆ ನೀಡಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ನರ್ಸಿಂಗ್ ಸಿಬ್ಬಂದಿ ಕೊರತೆ ಇತ್ತು. ಇದಕ್ಕೆ ಸರ್ಕಾರದಿಂದ ಸ್ಪಂದಿಸಿ, ಸ್ಥಳೀಯವಾಗಿ ವೈದ್ಯಾಧಿಕಾರಿಗಳು ಹಾಗೂ ನರ್ಸಿಂಗ್ ಸಿಬ್ಬಂದಿಗಳನ್ನು ನೇಮಕ ಮಾಡಲು ಅಧಿಕಾರ ನೀಡಲಾಗಿದೆ. ಇದರ ಆಧಾರದಲ್ಲಿ ನೇರವಾಗಿ ಸಂದರ್ಶನದ ಮೂಲಕ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರನ್ನು ಅಗತ್ಯ ಇರುವ ಕೋವಿಡ್ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ.

ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಿಲ್ಲೆಯ 7 ತಾಲೂಕುಗಳಿಗೆ ವೈದ್ಯರು ತಂಡವನ್ನು ನೇಮಿಸಲಾಗಿದೆ. ಕಿಮ್ಸ್‌ನಲ್ಲಿನ ಹೆಚ್ಚುವರಿ ವೈದ್ಯರು ಹಾಗೂ ಎಂ.ಬಿ.ಬಿ.ಎಸ್.ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವೈದ್ಯರನ್ನು ಸಹ ಈ ತಂಡದಲ್ಲಿ ನಿಯೋಜಿಸಲಾಗಿದೆ. ಪ್ರತಿ ತಂಡಕ್ಕೂ ವಾಹನಗಳ ನೀಡಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ, ಕೋವಿಡ್ ಕೇರ್ ಹಾಗೂ ಗ್ರಾಮಗಳಗೆ ತೆರಳಿ ಸೂಕ್ತ ಚಿಕಿತ್ಸೆ ನೀಡುವರು. ಕಿಮ್ಸ್ ಹಾಗೂ ಎಸ್.ಡಿ.ಎಂ.ನಿಂದ ಇನ್ನೂ‌ ಹೆಚ್ಚಿನ ವೈದ್ಯರನ್ನು ಗ್ರಾಮಗಳಿಗೆ ನಿಯೋಜಿಸಲಾಗುವುದು ಎಂದರು.

ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿತರು ಜವಬ್ದಾರಿ ಮರೆತು ನಾನಾ ಕಾರಣಗಳಿಂದ ಹಳ್ಳಿಗಳಲ್ಲಿ ಓಡಾಡುವ ಸಂದರ್ಭವಿರುತ್ತದೆ. ಹಾಗಾಗಿ ಇವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಲಾಗುತ್ತಿದೆ. ಇದುವರೆಗೂ ಹಳ್ಳಿಗಳಿಂದ 475 ಜನರು ಕೋವಿಡ್ ಕೇರ್ ಸೆಂಟರ್‌ಗಳ ದಾಖಲಾಗಿದ್ದಾರೆ.

ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರ ಮರಣದ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ ಸೋಂಕಿತರ ಮರಣದ ಆಡಿಟ್ ನೆಡೆಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.1 ರಷ್ಟು ಕೋವಿಡ್ ಮರಣದರ ಇರಬಹುದು ಎಂದು ಅಂದಾಜಿಸಲಾಗಿದೆ. ವಿರೋಧ ಪಕ್ಷದವರು ರಚನಾತ್ಮಕ ಸಲಹೆಯನ್ನು ಸರ್ಕಾರ ನೀಡಬೇಕು. ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಕೋವಿಡ್ ನಿರ್ವಹಣೆಗೆ ಹಗಳಿರಲು ಶ್ರಮಿಸುತ್ತಿದ್ದಾರೆ.‌

ಜಿಲ್ಲೆಯಲ್ಲಿ 135 ಬ್ಲಾಕ್ ಫಂಗಸ್ ಪ್ರಕರಣಗಳಿವೆ. ಅಂಪೋಟೆರಿಸನ್ ಬಿ ಔಷಧ ಸರಬರಾಜು ನಿರಂತರವಾಗಿದೆ. ವೈದ್ಯರು ಬ್ಲಾಕ್ ಫಂಗಸ್‌ಗೆ ಸೂಕ್ತ ಶಸ್ತ್ರಚಿಕಿತ್ಸೆಯನ್ನು ಸಹ ನೀಡುತ್ತಿದ್ದಾರೆ. ಕೋವಿಡ್ ವ್ಯಾಕ್ಸಿನ್ ಸರಬರಾಜು ಆಧರಿಸಿ ಜಿಲ್ಲೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಖಚಿತತೆಯ ಪ್ರಮಾಣ ಶೇ.14 ಇದೆ. ದಿನದಿಂದ ದಿನಕ್ಕೆ ಸೋಂಕು ಇಳಿಮುಖವಾಗುತ್ತಿದೆ. ಕೋವಿಡ್‌ ಹಾಗೂ ಸಾರಿ ಪ್ರಕರಣಗಳು ಒಂದೇ ರೀತಿಯ ಲಕ್ಷಣ ಹೊಂದಿರುತ್ತವೆ. ಸಾರಿ ಮೃತರಾದ ರೋಗಿಗಳ ವರದಿ ನೆಗೆಟಿವ್ ಬಂದರೆ, ಇದನ್ನು ಕೋವಿಡ್ ಮರಣದ ಸಂಖ್ಯೆಯಲ್ಲಿ ಸೇರಿಸುವುದಿಲ್ಲ ಎಂದರು.

*ಗ್ರಾಮಗಳಿಗೆ ವರವಾದ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ*

ಧಾರವಾಡ ಜಿಲ್ಲೆಯಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮಗಳ ಜನಸಂಖ್ಯೆ ಆಧಾರಿಸಿ ಆರೋಗ್ಯ ಇಲಾಖೆ ತಾಲೂಕುವಾರು ವೈದ್ಯರ ತಂಡವನ್ನು ನೇಮಿಸಿದೆ. ಗ್ರಾಮಗಳಿಗೆ ತೆರಳುವ ತಂಡದಲ್ಲಿ ಇಬ್ಬರು ವೈದ್ಯರು ಹಾಗೂ ಒಬ್ಬ ಸಹಾಯಕ ಸಿಬ್ಬಂದಿ ಕೆಲಸ ನಿರ್ವಹಸುವರು. ಅಗತ್ಯ ವೈದ್ಯಕೀಯ ಪರಿಕರ ಹಾಗೂ ಔಷಧಗಳನ್ನು‌ ತಂಡ ಗ್ರಾಮಗಳಿಗೆ ಕೊಂಡ್ಯುವುದು. ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ತಂಡ ಗ್ರಾಮಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿದೆ. ಜಿಲ್ಲೆಯಲ್ಲಿ 68 ಹಳ್ಳಿಗಳಗೆ ಭೇಟಿ ನೀಡಿರುವ ವೈದ್ಯರ ತಂಡ, 5700 ಕೋವಿಡ್ ಆರ್.ಟಿ.ಪಿ.ಸಿ.ಆರ್, 2500 ಕೋವಿಡ್ ರ್ಯಾಟ್ ಪರೀಕ್ಷೆಗಳನ್ನು ನೆಡೆಸಿದೆ. ಇದರೊಂದಿಗೆ 9000 ಅಧಿಕ ಜನರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಹಾಗೂ ಔಷಧಗಳನ್ನು ವಿತರಿಸಲಾಗಿದೆ. ಕಿಮ್ಸ್ ಹಾಗೂ ಎಸ್.ಡಿ.ಎಂ. ವೈದ್ಯಕೀಯ ಕಾಲೇಜುಗಳಿಂದ ಗ್ರಾಮೀಣ ಭಾಗಗಳಿಗೆ‌ ಹೆಚ್ಚಿನ ವೈದ್ಯರ ತಂಡ ನೇಮಿಸಿರುವುದರಿಂದ ಇನ್ನೂ ಹೆಚ್ಚಿನ ವೈದ್ಯರ ಸೇವೆ ಗ್ರಾಮೀಣ ಜನರಿಗೆ ಲಭಿಸಿದಂತಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಶವಂತ ಮದೀನಕರ ಮಾಹಿತಿ ನೀಡಿದರು.

ಈ‌ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿ.ಪಂ.ಸಿ.ಇ.ಓ ಡಾ.ಬಿ ಸುಶೀಲ, ಕಿಮ್ಸ್ ನಿರ್ದೇಶಕ‌ ಡಾ.ರಾಮಲಿಂಗಪ್ಪ ಅಂಟರಠಾಣಿ, ಕಿಮ್ಸ್ ಆಡಳಿತಾಧಿರಿ ರಾಜಶ್ರೀ ಜೈನಾಪುರ, ವೈಧ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್, ಆರ್.ಸಿ.ಹೆಚ್.ಓ.‌ಡಾ.ಎಸ್.ಎಂ.ಹೊನಕೇರಿ, ತಾಲೂಕು ವೈದ್ಯಾಧಿಕಾರಿ ಆರ್.ಎಸ್.ಹಿತ್ತಲಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]