ಹುಬ್ಬಳ್ಳಿ :ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಹುಬ್ಬಳ್ಳಿ ಕಿಮ್ಸ್ ಉತ್ತಮ ಕಾರ್ಯ ಮಾಡುತ್ತಿದೆ. ಕೊರೊನಾ ಹೊಡೆದೋಡಿಸಲು ಶ್ರಮಿಸುತ್ತಿರುವ ಕಿಮ್ಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಸಂಸದೀಯ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡದ ಈಗಲ್ ಡಿಟೆಕ್ಟಿವ್ ಪೋರ್ಸ್ ವತಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರ, ಸ್ವಚ್ಛತಾ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಗಾರ್ಡ್ ಗಳು ಸೇರಿದಂತೆ 500ಕ್ಕೂ ಹೆಚ್ಚು ಸಿಬ್ಬಂದಿಗೆ ನೀಡಲಾದ ಉಚಿತ ಆಹಾರ ಮತ್ತು ಅಗತ್ಯ ವಸ್ತುಗಳ ಕಿಟ್ ವಿತರಸಿ ಅವರು ಮಾತನಾಡಿದರು.
ಧಾರವಾಡದ ಈಗಲ್ ಡಿಟೆಕ್ಟಿವ್ ಪೋರ್ಸ್ ಕಿಮ್ಸ್ ಸಿಬ್ಬಂದಿಯ ಬಗ್ಗೆ ಹೊಂದಿರುವ ಕಾಳಜಿಗೆ ಧನ್ಯವಾದಗಳು.
ಆಸ್ಪತ್ರೆಯ ಸಿಬ್ಬಂದಿ ತಮ್ಮ ಸೇವೆಯ ಮೂಲಕ ಜನರ ಜೀವವನ್ನು ಉಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕೊರೊನಾ ಪ್ರಂಟ್ ಲೈನ್ ವರ್ಕಸ್ ಆಗಿ ಸೇವೆ ಸಲ್ಲಿಸುತ್ತಿರುವ ಕಿಮ್ಸ್ ನ ಸಿಬ್ಬಂದಿಗಳು ತಮ್ನ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಪ್ರತಿಯೊಬ್ಬರು ವಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈಗಲ್ ಡಿಟೆಕ್ಟಿವ್ ಪೋರ್ಸ್ ಸಂಸ್ಥೆಯ ಮುಖ್ಯಸ್ಥ ನಾಗಪ್ಪ ಬಿದರಿ ಮಾತನಾಡಿ, ನಿತ್ಯ ಕೊರೊನಾ ರೋಗಿಗಳ ಆರೈಕೆ ಹಾಗೂ ಮೃತರ ಅಂತ್ಯ ಸಂಸ್ಕಾರಕ್ಕೆ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಕಿಮ್ಸ್ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ಕೈಲಾದಷ್ಟು ಸಹಾಯ ಮಾಡುವ ನಿಟ್ಟಿನಲ್ಲಿ ಉಚಿತ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡುತ್ತಿದ್ದೇವೆ. ಕೊರೊನಾದಿಂದ ಗುಣಮುಖರಾಗಲು ಸ್ವಚ್ಛತಾ ಕಾರ್ಮಿಕರು, ಆಯಾಗಳು ಹಾಗೂ ಡಿ ದರ್ಜೆಯ ನೌಕರರ ಸೇವೆ ಅಪಾರವಾಗಿದೆ. ಪ್ರತಿಯೊಬ್ಬರು ಈ ಕೆಳ ಹಂತದ ನೌಕರರಿಗೆ ಗೌರವ ಸಲ್ಲಿಸಬೇಕು ಎಂದರು.
ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರತಾಣಿ, ಆಡಳಿತಾಧಿಕಾರಿ ರಾಜಶ್ರೀ ಜೈನಾಪೂರ, ಚಂದ್ರಶೇಕರ ಜಿಗಜಿನಿ, ಆನಂದ ಹಳ್ಳಿ, ಸಚೀನ್ ಬಿದರಿ ಸೇರಿದಂತೆ ಅನೇಕರು ಹಾಜರಿದ್ದರು.