ಹುಬ್ಬಳ್ಳಿ : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಮೇಯರ್ ಪ್ರತಿಭಟನಾಕಾರರೊಂದಿಗೆ ಬೈಟೆಕ್ ಕುಳಿತು ಮನವಿ ಆಲಿಸಿದರು.
ಕಳೆದ ೧೫ ದಿನಗಳಿಂದ ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಶ್ರೀರಾಮಸೇನೆ, ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳಿಂದ ನಗರದ ಈದ್ಗಾ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕೆಂದು ಗಡುವು ನೀಡಿತ್ತು.
ಈ ವೇಳೆ ಹಿಂದೂಪರ ಸಂಘಟನೆಗಳು ಗಜಾನನ ಮಹಾರಾಜ್ ಕೀ ಜೈ, ಜೈ ಶ್ರೀರಾಮ ಜಯ ಘೋಷಗಳನ್ನು ಕೂಗಿ ಪಾಲಿಕೆ ಆವರಣದಲ್ಲಿ ತಮ್ಮ ಕಿಚ್ಚನ್ನು ಹೊರ ಹಾಕಿದರು
ಅವಕಾಶ ನೀಡಿದರೂ ನೀಡದಿದ್ದರೂ ನಾವೂ ಗಣೇಶೋತ್ಸವ ಆಚರಣೆಗೆ ಮುಂದಾಗುತ್ತೇವೆ ಎಂದು ಪ್ರತಿಭಟನಾಕಾರರು ತಮ್ಮ ಪಟ್ಟು ಹಿಡಿದರು.
ನಂತರ ಮಾತನಾಡಿದ ಮೇಯರ್ ಈರೇಶ ಅಂಚಟಗೇರಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ನಾಳೆ ನಡೆಯುವ ಸಾಮಾನ್ಯ ಸಭೆಯಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ. ನಾಳೆ ಸಭೆಯಲ್ಲಿ ತಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕಿದೆ ಎಂದು ಹೇಳಿದರು.
ಒಟ್ಟಿನಲ್ಲಿ ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ನಾಳೆ ನಡೆಯುವ ಸಾಮಾನ್ಯ ಸಭೆಯಲ್ಲಿ ಸ್ಪಷ್ಟತೆ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಪ್ರತಿಭಟನೆ ಸಂದರ್ಭದಲ್ಲಿ ಹನುಮಂತಸಾ ನಿರಂಜನ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.