ಹುಬ್ಬಳ್ಳಿ ಸರ್ಕ್ಯೂಟ್ ಹೌಸ್‌ನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಲಧಾರೆ ವಿಸ್ತೃತ ಯೋಜನೆಗೆ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ. ಜಿಲ್ಲೆಯ ಪ್ರತಿ ಗ್ರಾಮದ ಮನೆ ಮನೆಗೂ ನಳ ಮೂಲಕ ಶುದ್ದ ಕುಡಿಯುವ ನೀರನ್ನು ಒದಗಿಸಲಾಗುವುದು. ಇದರೊಂದಿಗೆ 54 ಕೋಟಿ ರೂಪಾಯಿಗಳ ಅಣ್ಣಿಗೇರಿ ಪಟ್ಟಣದ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆದಷ್ಟು ಬೇಗ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಜರುಗಿದ ಸಚಿವ ಸಂಪುಟದಲ್ಲಿ ಏಳು ಜಿಲ್ಲೆಗಳ 9 ಸಾವಿರ ಕೋಟಿ ರೂಪಾಯಿಗಳ ಜಲ ಜೀವನ್ ಮಿಷ್‌ನ್ ಯೋಜನೆಗೆ ಅನುಮೋದನೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನರು ಮತುವರ್ಜಿ ವಹಿಸಿ ಯೋಜನೆಗಳು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವಲ್ಲಿ ಸಹಕಾರಿಯಾಗಿದ್ದಾರೆ. ಜಿಲ್ಲೆಯ ಜಲಧಾರೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ತರುವಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರು ಶ್ರಮ ವಹಿಸಿದ್ದಾರೆ. ಶಾಸಕರಾದ ಶಂಕರ್ ಪಾಟೀಲ್ ಮುನೇಕೊಪ್ಪ, ಅಮೃತ ದೇಸಾಯಿ ವಿಸ್ತೃತ ಯೋಜನೆ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುವುದಾಗಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಜಲಜೀವನ್ ಮಿಷ್‌ನ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಹರ್ ಘರ್ ನಲ್ ಜಲ್ ಯೋಜನೆ ಐತಿಹಾಸಿಕವಾಗಿದ್ದು 3.60 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. 2023 ಒಳಗಾಗಿ ಈಡೀ ದೇಶದ ಎಲ್ಲಡೆ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ನರ್ಬಾಡ್ ಮತ್ತು ವಿಶ್ವಬ್ಯಾಂಕ್ ಯೋಜನೆ ಅನುಷ್ಠಾನಕ್ಕೆ ಕೈ ಜೋಡಿಸಿವೆ. ರಾಜ್ಯದಲ್ಲಿ ನರ್ಬಾಡ್ ಯೋಜನೆ ಅನುಷ್ಠಾನಕ್ಕೆ ಆರ್ಥಿಕ ನೆರವು ನೀಡಲಿದೆ. ಜಲಧಾರೆ ಯೋಜನೆಗೆ ಆರಂಭಿಕ ಹಂತದಲ್ಲಿ ನೀಡಲಾದ ಅನುದಾನದಲ್ಲಿ ಪೈಪ್‌ಲೈನ್ ಅಳವಡಿಕೆ, ಒವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ಮಲಪ್ರಭಾ ನದಿಯಿಂದ ನೀರನ್ನು ಗ್ರಾಮಗಳಿಗೆ ತರವುದು ಸವಾಲಿನ ಕೆಲಸವಾಗಿದೆ. ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದರು.