ಹುಬ್ಬಳ್ಳಿ : ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಮೊನ್ನೆ ಶನಿವಾರ ರಾತ್ರಿ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಎಂದು ಬಿಂಬಿತವಾಗಿದ್ದ ಮೌಲಾನಾ ವಾಸಿಂ ಪಠಾಣ ಹೇಳಿಕೆಯ ವಿಡಿಯೊಂದನ್ನು ಬಿಡುಗಡೆ ಮಾಡಿದ್ದಾನೆ.
ಈ ವಿಡಿಯೋದಲ್ಲಿ ಮಾತನಾಡಿ, ಹುಬ್ಬಳ್ಳಿಯಲ್ಲಿ ದೊಡ್ಡ ಘಟನೆ ನಡೆದಿದೆ. ಈ ಕುರಿತು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ. ಇಸ್ಲಾಂ ಧರ್ಮಕ್ಕೆ ಅಪಮಾನ ಮಾಡಿದ ಬಗ್ಗೆ ಮುಸ್ಲಿಂ ಯುವಕರಲ್ಲಿ ಅಸಮಾಧಾನ ಇತ್ತು. ಈ ಕುರಿತು ದೂರು ನೀಡಲು ಹಲವಾರು ಯುವಕರು ಅಲ್ಲಿ ಜಮಾಯಿಸಿದ್ದರು. ಜನರ ಜೊತೆಗೆ ಮಾತನಾಡಲು ನನ್ನನ್ನು ಕರೆಸಿದ್ದರು. ಪೊಲೀಸರ ಜೊತೆಗೆ ಮಾತನಾಡಿದೆ. ಪೊಲೀಸರ ಸಹಕಾರ ಕೊಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರೇ ಜೀಪ್ ಹತ್ತಿ ಜನರಿಗೆ ತಿಳಿ ಹೇಳಲು ಹೇಳಿದರು. ನಾನು ವಾಹನದ ಮೇಲೆ ಹತ್ತಿದಾಗ ಅಲ್ಲಿ ಮೈಕ್ ಇರಲಿಲ್ಲ. ಹೀಗಾಗಿ ಕೈ ಸನ್ನೆ ಮಾಡುವ ಮೂಲಕ ಶಾಂತಿ ಕಾಪಾಡಲು ಹೇಳಿದೆ ಎಂದರು.
ಆದರೆ ನಾನೇ ಅದರ ಪಿತೂರಿದಾರ ಎಂದು ಬಿಂಬಿತಗೊಳ್ಳುತ್ತಿದೆ. ನಾನು ಘಟನೆ ಮಾಸ್ಟರ್ ಮೈಂಡ್ ಅಲ್ಲ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಹುಬ್ಬಳ್ಳಿಯ ವಾತಾವರಣ ಹದಗೆಡಿಸುವ ಉದ್ದೇಶ ನನ್ನದಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಪೊಲೀಸ್ ಇಲಾಖೆಯ ಬಗ್ಗೆ ನನಗೆ ಭರವಸೆ ಇದೆ. ಪೊಲೀಸರ ಮುಂದೆ ಹಾಜರಾಗಿ ನನ್ನ ಹೇಳಿಕೆ ಕೊಡುತ್ತೇನೆ ಎಂದರು