ಹುಬ್ಬಳ್ಳಿ: ನಟರಾಜ ಕಲಾ ಬಳಗ (ರಿ) ಹುಬ್ಬಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಬೆಂಗಳೂರು ಸಹಯೋಗದಲ್ಲಿ ಏ.13 ರಿಂದ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ರಂಗಸುಗ್ಗಿ ಹಮ್ಮಿಕೊಳ್ಳಲಾಗಿದೆ ಎಂದು ನಟರಾಜ ಕಲಾ ಬಳಗದ ಅಧ್ಯಕ್ಷ ಚನ್ನಬಸಪ್ಪ ಕಾಳೆ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಈಗಾಗಲೇ ಕಳೆದ ಹತ್ತುಗಳಿಂದ ನಟರಾಜ್ ಕಲಾ ಬಳಗದಿಂದ ದೇಶಭಕ್ತಿ ಮೂಡಿಸುವ ಹಲವಾರು ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದರಂತೆ ಇದೀಗ ಗ್ರಾಮೀಣ ಭಾಗದಲ್ಲಿ ನಶಿಸುತ್ತಿರುವ ಕಲೆಗಳಾದ ಹೆಜ್ಜೆಮೇಳ, ಮುಳ್ಳುಹೆಜ್ಜೆ ಕುಣಿತ, ಜಗ್ಗಲಗಿ ಮೇಳ, ಮೂಡಲಪಾಯ ದೊಡ್ಡಟಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ದೊಡ್ಡಾಟ, ರಂಗ ಸಂಗೀತ, ರಂಗಗೀತೆಗಳನ್ನು ಆಯೋಜಿಸಲಾಗಿದೆ ಎಂದರು.
ಏ.13 ರಂದು ಹಿರೇಹರಕುಣಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಆಟದ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಅರ್ಥಾತ್ ಮಹಿಷಾಸುರನ ವಧೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ಆಯೋಜಿಸಿದ್ದು,
ಇದನ್ನು ಬಿಜೆಪಿ ಮುಖಂಡ ಎಂ.ಆರ್.ಪಾಟೀಲ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಎಸ್.ಅಕ್ಕಿ, ಶಾಸಕಿ ಕುಸುಮಾವತಿ ಶಿವಳ್ಳಿ ಆಗಮಿಸುವರು. ಏ.22 ರಂದು ಬಮ್ಮಸಮುದ್ರ ಗ್ರಾಮದಲ್ಲಿ ಶ್ರೀಮಣ್ಣ ಬಸವೇಶ್ವರ ನವತರುಣ ನಾಣ್ಯ ಸಂಘದಿಂದ ಆರ್.ಸಿ.ಹಿರೇಮಠ ವಿರಚಿತ ಕರ್ಮಖಾಂಡದಲ್ಲಿ ಧರ್ಮಯುದ್ದ ಎಂಬ ರೌದ್ರಮಯ ಸಾಮಾಜಿಕ ನಾಟಕ, ಮೇ.4 ರಂದು ಸುಗಂಧಪುಷ್ಪ ಹರಣ ಮೂಡಲಪಾಯ, ಪೌರಾಣಿಕ ದೊಡ್ಡಾಡವನ್ನು ಪ್ರದರ್ಶನ ಮಾಡಲಾಗುವುದು ಎಂದರು.
ಮೇ.9 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ.ಮಲ್ಲಿಕಾರ್ಜುನ ಪಾಟೀಲ್ ವಿರಚಿತ ಮಂಡೋದರಿಕಲ್ಯಾಣ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ನಾಟಕ, ದೊಡ್ಡಾಟ ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗಪ್ಪ ಮಡ್ಲಿ, ಬಸವರಾಜ ಚಿಕ್ಕಹರಕುಣಿ, ವೀರಭದ್ರಗೌಡ ಪಾಟೀಲ, ಮಂಜುನಾಥಗೌಡ ಪಾಟೀಲ್, ಆರ್.ಸಿ.ಹಿರೇಮಠ ಇದ್ದರು.