ಹುಬ್ಬಳ್ಳಿ : ಫೆಬ್ರವರಿ ಅಂತ್ಯದೊಳಗೆ ಹು-ಧಾ ಮಹಾನಗರ ಪಾಲಿಕೆ ಆಡಳಿತ ಅಸ್ತಿತ್ವಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳಿಂದ ಪಾಲಿಕೆ ಚುನಾವಣೆ ನಡೆದಿದ್ದು, ನೂತನವಾಗಿ ಆಯ್ಕೆಯಾದ ಪಾಲಿಕೆ ಸದಸ್ಯರಿಗೆ ಅಧಿಕಾರ ಹಸ್ತಾಂತರ ಆಗಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಜಗದೀಶ್ ಶೆಟ್ಟರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಅಲ್ಲದೇ ಮೊನ್ನೆ ನಡೆದ ಕೋರ್ ಕಮಿಟಿ ಹಾಗೂ ಕಾರ್ಯಕಾರಿ ಸಭೆಯಲ್ಲೂ ಚರ್ಚಿಸಲಾಗಿದೆ. ಈ ದೃಷ್ಟಿಯಿಂದ ಫೆಬ್ರವರಿ ಅಂತ್ಯದ ಒಳಗೆ ಹು-ಧಾ ಸೇರಿದಂತೆ ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಕೂಡಾ ಅಸ್ತಿತ್ವಕ್ಕೆ ಬರಲಿದೆ ಎಂದರು.
ಲಸಿಕಾಕರಣದಲ್ಲಿ ಮೋದಿ ಸಾಧನೆ:
ದೇಶದಲ್ಲಿ ಕಳೆದ ಒಂದು ವರ್ಷದಲ್ಲಿ 156 ಕೋಟಿ ಲಸಿಕೆ ನೀಡಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಸ ಅಧ್ಯಾಯ ಬರೆದಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ವಿಜ್ಞಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ವದೇಶಿ ಲಸಿಕೆ ಕಂಡು ಹಿಡಿದು ಜನಗಳ ರಕ್ಷಣೆ ಮಾಡಿದೆ. ಇದಕ್ಕೆ ಉದ್ಯಮಿಗಳು, ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರು ಕೈಜೋಡಿಸಿದ್ದಾರೆ. ಅವರಿಗೆಲ್ಲ ಬಿಜೆಪಿಯಿಂದ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಪ
ಸದಸ್ಯ ಪ್ರದೀಪ್ ಶೆಟ್ಟರ್, ಹು-ಧಾ ಜಿಲ್ಲಾಧ್ಯಕ್ಷ ಸಂಜಯ ಕಪಟಕರ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ್ ಕುಂದಗೋಳಮಠ, ಹುಢಾ ಅಧ್ಯಕ್ಷ ನಾಗೇಶ ಕಲಬುರಗಿ, ವಕ್ತಾರ ರವಿ ನಾಯಕ ಇದ್ದರು.