ಹುಬ್ಬಳ್ಳಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ಅದರಲ್ಲೂ ಗ್ರಾಮೀಣ ಪ್ರದೇಶಗಳಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಅನುಭವ ಅನನ್ಯ ಹಾಗೂ ಸ್ಮರಣೀಯ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ನಿರ್ಗಮಿತ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಗೋಕುಲ ರಸ್ತೆಯಲ್ಲಿರುವ ವಾಕರಸಾಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಕಚೇರಿಯಲ್ಲಿ ಆಯೋಜಿಸಿದ್ದ
ವರ್ಗಾವಣೆ ನಿಮಿತ್ಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಜನ ಪ್ರತಿನಿಧಿಗಳು, ಜಿಲ್ಲಾಡಳಿತ, ಮಾಧ್ಯಮ ಸ್ನೇಹಿತರು, ಸಹೋದ್ಯೋಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಹಲವಾರು ಪ್ರಯಾಣಿಕ ಸ್ನೇಹಿ ಉಪಕ್ರಮಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಟಅನಗೊಳಸಲು ಸಾಧ್ಯವಾಯಿತು.
ಕೋವಿಡ್ ಮೊದಲನೇ ಅಲೆ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿ ಸಿಲುಕಿಕೊಂಡಿದ್ದ ಗುಜರಾತಿನ 58 ವೈದ್ಯ ವಿದ್ಯಾರ್ಥಿಗಳು ಸೇರಿದಂತೆ ಇತರೆ ರಾಜ್ಯಗಳ ಸಾವಿರಾರು ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸಲು ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ರಾಜ್ಯದ ಸಾವಿರಾರು ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಸ್ಥೆಯ ನೌಕರರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ಡಿಪೋ ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷಾ ಶಿಬಿರಗಳು ಹಾಗೂ ಕೋವಿಡ್ ಲಸಿಕಾ ಅಭಿಯಾನ ಗಳ ಆಯೋಜನೆ ಮಾಡಲಾಗಿದೆ. ಬಸ್ಸುಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಅನುಷ್ಟಾನ ಮಾಡಲಾಗಿದೆ.
ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಬಸ್ ಡಿಪೋ ಗಳಲ್ಲಿ ಗಾರ್ಡನ್ ಗಳ ನಿರ್ಮಾಣ ಮಾಡಲಾಗಿದೆ.ನಿರುಪಯುಕ್ತ ಹಾಗೂ ಗುಜರಿ ವಸ್ತುಗಳನ್ನು ಬಳಸಿಕೊಂಡು ಬಸ್ ನಿಲ್ದಾಣಗಳ ಸ್ವಚ್ಛತಾ ಹಾಗೂ ಬಸ್ ಗಳ ನಿರ್ವಹಣೆ ಪರಿಕರಗಳನ್ನು ತಯಾರಿಸಿ ಸಂಸ್ಥೆಗೆ ಲಕ್ಷಾಂತರ ರೂಪಾಯಿಗಳ ಉಳಿತಾಯ ವಾಗಿದೆ. ಕೋವಿಡ್ ಲಸಿಕೆ ಮಹತ್ವ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಬಗ್ಗೆ ಬಸ್ ಟಿಕೆಟ್ ನಲ್ಲಿ ಕೋವಿಡ್ ಜಾಗೃತಿ ಸಂದೇಶಗಳ ಮುದ್ರಣ ಮಾಡಲಾಗಿದೆ. ಸೋಂಕಿನಿಂದ ಬಾಧಿತರಾದ ನೌಕರರಿಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಸ್ಪತ್ರೆ, ಕಿಮ್ಸ್ ಮತ್ತಿತರೆ ಆಸ್ಪತ್ರೆಗಳಲ್ಲಿ ಉತ್ತಮ ಹಾಗೂ ಸಕಾಲಿಕ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ.
ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಬಸ್ ನಿಲ್ದಾಣ ಗಳಲ್ಲಿ ಸ್ವಚ್ಛತಾ ಅಭಿಯಾನಗಳ ಆಯೋಜನೆ ಮಾಡಲಾಗಿದೆ.ನಾಡಿನ ಪರಂಪರೆ ಶ್ರೀಮಂತಿಕೆ ಬಿಂಬಿಸುವ ಸಾರಿಗೆ ಬಸ್ ನ್ನು ಕನ್ನಡ ರಥ ಹಾಗೂ ಲಸಿಕಾ ರಥ ಗಳನ್ನಾಗಿ ಮಾರ್ಪಡಿಸುವ ಮೂಲಕ ಕನ್ನಡ ರಾಜ್ಯೋತ್ಸವದ ವಿಶಿಷ್ಟ ಆಚರಣೆ ಮಾಡಲಾಗಿದೆ. ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ಒತ್ತಡ ನಿರ್ವಹಣೆ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳ ಆಯೋಜನೆ ಮಾಡಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿಯೇ ಪ್ರಪ್ರಥಮವಾಗಿ ಬಸ್ ಪ್ರಯಾಣಿಕರಿಗಾಗಿ ಹುಬ್ಬಳಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಗ್ರಂಥಾಲಯ ಆರಂಭಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಪೋಲಿಸ್ ಇಲಾಖೆಯ ಸಹಯೋಗದಲ್ಲಿ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಹುಬ್ಬಳ್ಳಿ ಪಶ್ಚಿಮ ಶಾಖೆಯ ಸಹಯೋಗದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳಾದ ಪ್ರವೀಣ ಈಡೂರ,ಶ್ರೀಪತಿ ದೊಡ್ಡಲಿಂಗಣ್ಣವರ, ಎಸ್.ವಿ.ಅಂಗಡಿ,ಎನ್.ಎಫ್.ಹೊಸಮನಿ, ಶಂಕರ ಆಲಮೇಲ, ಸದಾನಂದ ಒಡೆಯರ, ಸುನಿಲ ವಾಡೆಕರ, ನಾಗಮಣಿ ಭೋವಿ, ರೋಹಿಣಿ,ಬಸಪ್ಪ ಪೂಜಾರಿ,ದೇವಕ್ಕ ನಾಯ್ಕ,ಸುಮಂಗಲ ಹಿರೇಮಠ, ಐ.ಜಿ.ಮಾಗಾಮಿ ಮತ್ತಿತರರು ನಿರ್ಗಮಿತ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ ಅವರ ಅವಧಿಯಲ್ಲಿನ ಪ್ರಮುಖ ಕಾರ್ಯಗಳ ಮೆಲುಕು ಹಾಕಿದರು.
ಇದೇ ಸಂದರ್ಭದಲ್ಲಿ
ನೂತನ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಎಲ್.ಶ್ರೀನಾಥ ರನ್ನು ಸ್ವಾಗತಿಸಲಾಯಿತು.