ಹುಬ್ಬಳ್ಳಿ : ಇಲ್ಲಿನ ಪುಣೆ- ಬೆಂಗಳೂರು ರಸ್ತೆ ಬುಡರಸಿಂಗಿ ಕ್ರಾಸ್ ಬಳಿ ರಸ್ತೆಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಹಿಂದಿದ್ದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಲ್ಮೇಶ ಯಂಕಮ್ಮನವರ (26) ಹಾಗೂ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರದ ಕಲ್ಮೇಶ ಜಾಧವ (26) ಮೃತಪಟ್ಟವರು. ಮುಂಡಗೋಡದ ವಿನಾಯಕ ಮಾನಾಬಾಯಿ ಎಂಬಾತ ಗಾಯಗೊಂಡಿದ್ದಾನೆ.
ಟ್ರ್ಯಾಕ್ಟರ್ ಪಂಕ್ಚರ್ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಿದ್ದರು. ಈ ವೇಳೆ ಮಹಾರಾಷ್ಟ್ರದ ಬಾವುಸಾಹೇಬ ಡಾಕನೆ ಎಂಬಾತ ಟ್ಯಾಂಕರ್ ಚಲಾಯಿಸಿಕೊಂಡು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ. ಟ್ಯಾಂಕರ್ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಟ್ರ್ಯಾಕ್ಟರ್ ಟೇಲರ್‌ಗೆ ಜಾಕ್ ಅಳವಡಿಸುತ್ತಿದ್ದ ಕಲ್ಮೇಶ ಯಂಕಮ್ಮನವರ ಹಾಗೂ ಕಲ್ಮೇಶ ಜಾಧವ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Hubli News Latest Kannada News