ಹುಬ್ಬಳ್ಳಿ : ಇಲ್ಲಿನ ಗಬ್ಬೂರು ಬಿಡನಾಳ ನಡುವಿನ ಶ್ರೀ ಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ನವರಾತ್ರಿ ಉತ್ಸವ ಪ್ರಾರಂಭವಾಗಿದ್ದು, ಇಂದು ನವರಾತ್ರಿ ನಾಲ್ಕನೇ ದಿನ ತಾಯಿ ಕೂಷ್ಮಾಂಡಾರನ್ನು ಪೂಜಿಸಲಾಯಿತು.
ನೂರಾರು ವರ್ಷದ ಇತಿಹಾಸ ಹೊಂದಿರುವ ಶ್ರೀ ಗಾಳಿ ದುರ್ಗಮ್ಮ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ನವರಾತ್ರಿ ಉತ್ಸವ ಆಚರಿಸಲಾಗುತ್ತದೆ. ದೇವಿಗೆ ಒಂಬತ್ತು ದಿನಗಳು ಒಂಬತ್ತು ಅವತಾರಗಳ ಅಲಂಕಾರವನ್ನು ಮಾಡಲಾಗುತ್ತಿದೆ. ಇಂದು ದೇವಸ್ಥಾನದಲ್ಲಿ ದೇವಿಗೆ ಚಿನ್ನಾಭರಣ, ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ಗುರುವಾರ ಸಂಜೆ ಘಟ ಸ್ಥಾಪಿಸಲಾಯಿತು. ಮಹಾನವಮಿ ಅಂಗವಾಗಿ ಕುಂಬಳಕಾಯಿ ಒಡೆದು ಪೂಜಿಸಲಾಗುವುದು. ನಂತರ ಬನ್ನಿಮುಡಿಯುವ ಕಾರ್ಯಕ್ರಮ ಹಾಗೂ ದೇವಿಯನ್ನು ತವರು ಮನೆಗೆ ಕಳುಹಿಸುವುದು ಹಾಗೂ ವಿವಿಧ ಧಾರ್ಮಿಕ, ವಿಧಿವಿಧಾನಗಳು ನಡೆಯುತ್ತವೆ. ಇಲ್ಲಿಗೆ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದು ಹೋಗುತ್ತಿದ್ದಾರೆ ಎಂದು ಶ್ರೀ ಗಾಳಿ ದುರ್ಗಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿರುಪಾಕ್ಷಪ್ಪ ಹರ್ಲಾಪುರ ಹೇಳಿದರು.