ಹುಬ್ಬಳ್ಳಿ : ನೃಪತುಂಗ ಬೆಟ್ಟ, ರಾಜನಗರ, ಶಿರಡಿನಗರದ ಸುತ್ತಮತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸೆರೆ ಹಿಡಿಯುವ ಕಾರ್ಯಾಚರಣೆ ತೀವ್ರಗತಿಯಲ್ಲಿ ನೆಡೆದಿದೆ. ಜಿಲ್ಲಾಡಳಿತದಿಂದ ಅರಣ್ಯ ಇಲಾಖೆಗೆ ಅಗತ್ಯವಿರುವ ಸಹಾಯವನ್ನು ಒದಗಿಸುವುದಾಗಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ರಾಜನಗರದಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಚಿರತೆ ಸರೆಹಿಡಿಯುವ ಕಾರ್ಯಾಚರಣೆ ಕುರಿತು ಅರಣ್ಯ, ಪೊಲೀಸ್, ಮಹಾನಗರ ಪಾಲಿಕೆ, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿಗಳ ಸಭೆ ಜರುಗಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಭೆಯಲ್ಲಿ ಜನಪ್ರತಿನಿಧಿಗಳು ನೀಡಿರುವ ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಕೇಂದ್ರೀಯ ವಿದ್ಯಾಲಯದ 17 ಎಕರೆ ಜಾಗದಲ್ಲಿ ಹುಲ್ಲು, ಗಿಡ ಗಂಟೆಗಳು ಬೆಳೆದು ನಿಂತಿವೆ. ವಿದ್ಯಾಲಯದ ಹಳೆ ಕಟ್ಟಡ ಚಿರತಗೆ ಸುರಕ್ಷಿತ ಅಡಗು ತಾಣವಾಗಿರಬಹದು. ಅರಣ್ಯ ಇಲಾಖೆ ಅಧಿಕಾರಿಗಳ ವೀಕ್ಷಣೆಯಂತೆ ಹಳೆಯ ಕಟ್ಟದಲ್ಲಿ ಚಿರತೆ ಪಂಜದಿಂದ ಗೀರಿರುವ ನಿಶಾನೆಗಳು ಲಭಿಸಿವೆ. ಕಟ್ಟಡವನ್ನು ಕೆಡವಲು ದೆಹಲಿಯ ಕೇಂದ್ರೀಯ ವಿದ್ಯಾಲಯದ ಕಚೇರಿಗೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಕಟ್ಟವನ್ನು ಜಿಲ್ಲಾಡಳಿತವೇ ನೆಲಸಮಗೊಳಿಸಿ ತೆರವುಗೊಳಿಸಲಿದೆ ಎಂದರು. ಚಿರತೆ ಚಲನವಲ ಕಂಡುಬಂದ ಎಲ್ಲಾ ಏರಿಯಾಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗುವುದು. ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಗಲು ಹಾಗೂ ರಾತ್ರಿ ಪಾಳೆಯಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್ ಮಾತನಾಡಿ, ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷದಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಚಿರತೆ ಸೆರೆ ಹಿಡಿಯುವವರೆಗೆ ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು. ಚಿರತೆ ಓಡಾಟದ ಸಂಭಾವ್ಯ ಇರುವ 5 ಕಡೆ ಬಂಧನಕ್ಕೆ ಬೋನು ಇಡಲಾಗಿದೆ. ದ್ರೋಣ್ ಕ್ಯಾಮರಾ ಮೂಲಕ ಚಲನವಲದ ಮೇಲೆ ನಿಗಾ ಇಡಲಾಗಿದೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆ ಚಿರತೆಯ ಚಟುವಟಿಕೆ ಹೆಚ್ಚಾಗಿ ಕಂಡುಬರುತ್ತದೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು. ಬೇರೆಯವರನ್ನು ಜಾಗೃತಿಗೊಳಿಸಬೇಕು ಎಂದರು.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಮಾತನಾಡಿ, ಚಿರತೆಯ ಪಗ್ ಮಾರ್ಕ್ ಸಿಕ್ಕಿದೆ. ಅರಣ್ಯ ಇಲಾಖೆ ಸಿಬ್ಬಂದಿಯವರು ಕಣ್ಣಾರೆ ಚಿರತೆಯನ್ನು ನೋಡಿದ್ದಾರೆ. ಚಿರತೆ ಕಂಡುಬಂದ ಪ್ರದೇಶಗಳನ್ನು ಗುರುತಿಸಿ ಚಿರತೆ ಓಡಾಟದ ನಕ್ಷೆ ತಯಾರು ಮಾಡಲಾಗಿದೆ. 40 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಅರವಳಿಕೆ ತಜ್ಞರು ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಇನ್ಪ್ರಾರೆಡ್ ದ್ರೋಣ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುವುದು. ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗುವುದು ಎಂದರು.
ಸಿದ್ದು ಮೊಗಲಿಶೆಟ್ಟರ್ ಮಾತನಾಡಿ,
ನೃಪತುಂಗ ಬೆಟ್ಟದ ವಾಯುವಿಹಾರ ಅಸೋಸಿಯೇಷನ್ ಕಡೆಯಿಂದ ಸಾರ್ವಜನಿಕರಿಗೆ ವಾಯುವಿಹಾರ ಬರದಂತೆ ವಾಟ್ಸಪ್ ಗ್ರೂಪ್ ಮೂಲಕ ತಿಳಿಸಲಾಗಿದೆ. ಬೆಟ್ಟದ ತಳದಲ್ಲಿ ನಿಂತು ಎಚ್ಚರಿಕೆ ಸಹ ನೀಡಲಾಗುತ್ತಿದೆ. ಚಿರತೆಯನ್ನು ಕಣ್ಣಾರೆ ಕಂಡವರು ಭಯಬೀತರಾಗಿದ್ದಾರೆ. ಬೇಗನೆ ಚಿರತೆಯನ್ನು ಸರೆ ಹಿಡಿಯುವಂತೆ ಕೋರಿಕೊಂಡರು.
ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಡಿ.ಸಿ.ಪಿ.ರಾಮರಾಜನ್, ತಹಶೀಲ್ದಾರ್ ಶಶಿಧರ ಮಾಡ್ಯಾಳ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ರವಿ ರಾಜೇಶ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.