ಹುಬ್ಬಳ್ಳಿ : ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಶ್ರೀ ಮಲ್ಲಿಕಾರ್ಜುನ ಅಲೆ ಮಾರಿ ದಾಲಪಟಾ ಕಲಾವಿದರ ಸಂಘ ಹಾಗೂ ಶ್ರೀ ಅಲೆಮಾರಿ ಜಾನಪದ ಗೊಂಬೆ ಕುಣಿತ ಕಲಾವಿದರ ಸಂಘದ ಸದಸ್ಯರು ನಗರದಲ್ಲಿಂದು ಭಿಕ್ಷಾಟನೆ ಮಾಡಲು ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾವಣೆಗೊಂಡ ಸಂಘದ ಕಲಾವಿದರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಪಾದಯಾತ್ರೆ ಮೂಲಕ ಭಿಕ್ಷಾಟನೆ ಮಾಡುತ್ತಾ ತಹಶಿಲ್ದಾರರ ಕಚೇರಿವರೆಗೆ ಬಂದು ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಕಲಾವಿದರು ಪ್ರಕಾಶ್ ಜಾಡರ್ ಮಾತನಾಡಿ, ಮೊದಲೇ ಕೊರೋನಾ ಲಾಕ್ ಡೌನ್ ದಿಂದಾಗಿ ಕಲಾವಿದರು ಕೈಯಲ್ಲಿ ಕೆಲಸವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕೊರೋನಾ ಸಂಖ್ಯೆ ಕಡಿಮೆಯಾಗಿದ್ದರು ಸಹಿತ ಸರ್ಕಾರ ಉತ್ಸವ ಮತ್ತು ಜಯಂತಿಗಳ ಆಚರಣೆ ಅನುಮತಿ ನೀಡಿಲ್ಲ. ಪರಿಣಾಮ ಉತ್ಸವಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದಕು ಅತಂತ್ರಗೊಂಡಿದ್ದು, ನಿತ್ಯದ ಬದಕು ನಡೆಸುವುದೇ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಇತರ ಕ್ಷೇತ್ರಗಳಿಗೆ ಕೊರೋನಾ ಮಾರ್ಗಸೂಚಿಗಳಂತೆ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಂಗಕಲಾ ಪರಿಷತ್ತಿನ ಅಧ್ಯಕ್ಷ ಸಂಜೀವ ದುಮಕನಾಳ, ಪ್ರಕಾಶ ಜಾಡರ, ಧಾರವಾಡ ಜಿಲ್ಲಾ ವಾಧ್ಯವೃಂದ ಕಲಾವಿದರ ಸಂಘದ ಸದಸ್ಯರಾದ ವಿಜಯಕುಮಾರ, ರಾಜೇಶ್ವರಿ ಜಾಲಿಹಾಳ ಸೇರಿದಂತೆ ಹುಬ್ಬಳ್ಳಿಯ ರಂಗಭೂಮಿ ಕಲಾವಿದರು ಇದ್ದರು.