ಸೆ.14 ರಂದು ರಾಷ್ಟ್ರವ್ಯಾಪಿ ಶ್ರೀವೀರಭದ್ರಸ್ವಾಮಿ ಜಯಂತಿ ಮಹೋತ್ಸವ
ಹುಬ್ಬಳ್ಳಿ: ಶಿವ ಸಂಸ್ಕೃತಿಯ ಮೂಲಪುರುಷ ಶ್ರೀ ವೀರಭದ್ರ ಸ್ವಾಮಿಯ ಜಯಂತೋತ್ಸವವನ್ನು ಸೆಪ್ಟೆಂಬರ್ 14 ರಂದು ರಾಷ್ಟ್ರವ್ಯಾಪಿಯಾಗಿ ಏಕಕಾಲಕ್ಕೆ ಆಚರಿಸಬೇಕೆಂದು ವೀರಶೈವ- ಲಿಂಗಾಯತ ಸಂಘಟನಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿಗಳು ಜಂಟಿಯಾಗಿ ಕರೆ ನೀಡಿತು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಗಿರೀಶಕುಮಾರ ಬುಡರಕಟ್ಟಿಮಠ ಈ ವಿಷಯ ತಿಳಿಸಿದ ಅವರು, ವೀರಭದ್ರಸ್ವಾಮಿಯ ಪರಂಪರೆ, ಸಂಪ್ರದಾಯ, ಅರ್ಚನೆ, ಆರಾಧನೆ ಬಹಳಷ್ಟು ಕಾಲದಿಂದಲೂ ನಡೆದುಕೊಂಡು ಬಂದಿದೆ. ವೀರ ಶೈವ ಧರ್ಮದ ಗುರುಪರಂಪರೆಯ ಮೂಲ ಧರ್ಮಪೀಠಗಳಾದ ಶ್ರೀರಂಭಾಪುರಿ, ಶ್ರೀಉಜ್ಜಯಿನಿ, ಶ್ರೀಕೇದಾರ, ಶ್ರೀಶ್ರೀಶೈಲ ಹಾಗೂ ಶ್ರೀಕಾಶಿ ಪೀಠಗಳ ಪರಂಪರೆಯಲ್ಲಿ ಶ್ರೀ ವೀರಭದ್ರಸ್ವಾಮಿಯ ಉಲ್ಲೇಖ ಕಂಡುಬರುತ್ತದೆ. ಶ್ರೀ ವೀರಭದ್ರಸ್ವಾಮಿಯು ಶ್ರೀರಂಭಾಪುರಿ ಜಗದ್ಗುರು ಪೀಠದ ಗೋತ್ರಪುರುಷನೂ ಆಗಿದ್ದು, ಕರ್ನಾಟಕ ಸೇರಿದಂತೆ ದೇಶದ ಬಹುಪಾಲು ರಾಜ್ಯದಲ್ಲಿ ವೀರಭದ್ರಸ್ವಾಮಿಯ ಭಕ್ತರಿದ್ದು, ಭಾದ್ರಪದ ಮಾಸದ ಮೊದಲ ಮಂಗಳವಾರದಂದು ದೇಶದ ಎಲ್ಲೆಡೆಯೂ ಏಕಕಾಲದಲ್ಲಿ ವೀರಭದ್ರೇಶ್ವರ ಜಯಂತಿ ಆಚರಿಸಲು ಕರೆಕೊಡಲಾಗಿದೆ ಎಂದರು.
ಇನ್ನು, ಸೆಪ್ಟೆಂಬರ್ 14 ರಂದು ಸಂಜೆ 5 ಗಂಟೆಗೆ ರಾಷ್ಟ್ರಮಟ್ಟದ ಶ್ರೀ ವೀರಭದ್ರೇಸ್ವಾಮಿ ಜಯಂತಿ ಮಹೋತ್ಸವವನ್ನು ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದಾರೆ. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರಾಧ್ಯಕ್ಷ ಪ್ರದೀಪ ಕಂಕಣವಾಡಿ, ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಾಚಾರ ಸಮಿತಿ ರಾಜ್ಯಾಧ್ಯಕ್ಷ ಸಿ.ಎಂ.ಶಿವಕಿರಣ ಕಲಬುರಗಿ ಸೇರಿದಂತೆ ವಿವಿಧ ರಾಜ್ಯಗಳ ಮಠಾಧೀಶರು, ವೀರಶೈವ ಲಿಂಗಾಯತ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಶ್ರೀವೀರಭದ್ರೇಶ್ವರ ಪ್ರಾಚಾರ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪಿಎಂ ಚಿಕ್ಕಮಠ, ರಮೇಶ ಉಳ್ಳಾಗಡ್ಡಿ, ರಾಜ್ಯ ವಕ್ತಾರ ನ್ಯಾಯವಾದಿ ಪ್ರಕಾಶ ಅಂದಾನಿಮಠ, ಧಾರವಾಡ ಜಿಲ್ಲಾಧ್ಯಕ್ಷ ಗದಿಗೆಯ್ಯ ಹಿರೇಮಠ, ಕಾರ್ಯದರ್ಶಿ ಚೆನ್ಮಯ್ಯ ಚೌಕಿಮಠ, ಸಂಘಟನಾ ಕಾರ್ಯದರ್ಶಿ ಶಂಕರ ಕುರ್ತಕೋಟಿ ಇದ್ದರು.