ಹುಬ್ಬಳ್ಳಿ : ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹುಬ್ಬಳ್ಳಿಯ ಗಿರಣಿಚಾಳ ನಿವಾಸಿಗಳ ಸಂರಕ್ಷಣಾ ಸಮಿತಿ ಹಾಗೂ ದಲಿತ ಒಕ್ಕೂಟ ಒತ್ತಾಯ ಮಾಡಿದೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ಸಹ ಕಾರ್ಯದರ್ಶಿ ಪರಶುರಾಮ ಪೂಜಾರ ಅವರು, ಶಂಕರಪಾಟೀಲ ಮುನೇನಕೊಪ್ಪ ಅವರೊಬ್ಬ ಜಾತ್ಯಾತೀತ ನಾಯಕರಾಗಿದ್ದಾರೆ. ಎರಡು ಬಾರಿ ಶಾಸಕರಾಗಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾಗಿ, ನಿಗಮ ಮಂಡಳಿಯ ಅಧ್ಯಕ್ಷರಾಗಿ ಉತ್ತಮ ಕಾರ್ಯ ನಿಭಾಯಿಸಿ ಅನುಭವ ಹೊಂದಿದ್ದಾರೆ. ರೈತರ, ದೀನ ದಲಿತರ, ಬಡವರ ಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಸಾಕಷ್ಟು ವಿನೂತನ ಯೋಜನೆಗಳನ್ನು ತರುವುದರ ಜೊತೆಗೆ ನವಲಗುಂದ ಮತಕ್ಷೇತ್ರವನ್ನು ಧಾರವಾಡ ಜಿಲ್ಲೆಯಲ್ಲಿ ಮಾದರಿ ಮತಕ್ಷೇತ್ರ ಮಾಡಿದ್ದಾರೆ ಅವರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದರೇ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಶಂಕರಪಾಟೀಲ್ ಮುನ್ನೇನಕೊಪ್ಪರವರಿಗೆ ಸಚಿವ ಸ್ಥಾನ ನೀಡಿದಲ್ಲಿ, ಉತ್ತರ ಕರ್ನಾಟಕ ಅದರಲ್ಲೂ ಧಾರವಾಡ ಜಿಲ್ಲೆ ಸಾಕಷ್ಟು ಅಭಿವೃದ್ದಿಯಾಗಬಹುದೆಂಬ ಆಶಾಭಾವನೆ ಹೊಂದಿದ್ದೇವೆ. ಹೀಗಾಗಿ ಶಂಕರಪಾಟೀಲ ಮುನೇನಕೊಪ್ಪ ಅವರಿಗೆ ಸಚಿನ ಸ್ಥಾನ ನೀಡಬೇಕೆಂಬ ಅಗ್ರಹ ನಮ್ಮದಾಗಿದೆ ಎಂದು ಹೇಳಿದರು.