ಹುಬ್ಬಳ್ಳಿ : ಮುಂಬರುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲಾ 82 ವಾರ್ಡ್ ಗಳಲ್ಲಿ ಶಿವಸೇನಾದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಶಿವಸೇನಾದ ಅಧ್ಯಕ್ಷ ಕುಮಾರ ಹಕಾರಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದಲ್ಲಿ ಪಕ್ಷವನ್ನು ಎಲ್ಲ ರೀತಿಯಿಂದ ಸದೃಢಗೊಳಿಸುವ ಕೆಲಸ ಮಾಡಲಾಗುತ್ತಿದ್ದು, ಈಗಾಗಲೇ ಎಲ್ಲ ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ಪ್ರಾರಂಭ ಮಾಡಲಾಗಿದೆ. ಇದಕ್ಕಾಗಿ ಹು-ಧಾ ಮಹಾನಗರ ಜಿಲ್ಲಾ ವತಿಯಿಂದ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪ್ರಣಾಳಿಕೆ ಸಿದ್ದಪಡಿಸುವ ಮತ್ತು ಪ್ರಚಾರ ಕಾರ್ಯ ರೂಪಿಸಲು ಲಕ್ಷ್ಮಣ ಮೊರಬ, ರಾಘವೇಂದ್ರ ಕಠಾರೆ, ಗಣೇಶ ಕದಂ, ಸುಭಾಷ ಮುಂಡಗೋಡ, ಸುಭಾಷ್ ಬಟ್ಟ, ಸಿದ್ದು ಭೋಸ್ಲೆ ಒಳಗೊಂಡ ಕೋರ್ ಕಮಿಟಿಯನ್ನು ರಚನೆ ಮಾಡಲಾಗಿದೆ ಎಂದರು.
ಇನ್ನೂ ಮುಂದೆ ನಡೆಯುವ ಹಾನಗಲ್ ಹಾಗೂ ಸಿಂದಗಿ ಎರಡು ವಿಧಾನಸಭೆ ಉಪಚುನಾವಣೆ, ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಚುನಾವಣೆಗೆ ಶಿವಸೇನಾ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಘಟಕಗಳು ಸಕ್ರಿಯವಾಗಿದ್ದು, ತಾಲೂಕು ಘಟಕ ಜಿಲ್ಲಾ ಘಟಕಗಳ ರಚನಾ ಕಾರ್ಯ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ವಿನಯ ಮಾಳದಕರ, ಕಾರ್ಯಾಧ್ಯಕ್ಷ ಕುಬೇರ ಪವಾರ್, ಉಪಾಧ್ಯಕ್ಷ ಶಿವು ಮತ್ತಿಗಟ್ಟಿ, ಅಪ್ಪಣ್ಣ ದೊಡ್ಡಮನಿ, ರಾಘವೇಂದ್ರ ಕಠಾರೆ, ಬಸವರಾಜ ಮಳ್ಳಿ ಸೇರಿದಂತೆ ಮುಂತಾದವರು ಇದ್ದರು.