ಹುಬ್ಬಳ್ಳಿ: ಮಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟ ಹಾಗೂ ಸೋಂಕಿನಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ನೆರವು ನೀಡಲು ಕೆಪಿಸಿಸಿ ರಾಜ್ಯಾದ್ಯಾಂತ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ “ಕೋವಿಡ್-19 ಸಹಾಯಹಸ್ತ” ಅಭಿಯಾನದ ಅಂಗವಾಗಿ ಶನಿವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು ಕ್ಷೇತ್ರ ವ್ಯಾಪ್ತಿಯ ಬಮ್ಮಾಪುರ
ಬ್ಲಾಕ್ ನಲ್ಲಿ ಬರುವ ಗಣೇಶಪೇಟೆಯಲ್ಲಿ ಚಾಲನೆ ನೀಡಿದರು.
ಗಣೇಶಪೇಟೆ, ಶೆಟ್ಟರ ಓಣಿ ಇನ್ನಿತರೆಡೆ ಕೋವಿಡ್ ನಿಂದ ಸಂಕಷ್ಟಕ್ಕೀಡಾದ ಕುಟುಂಬಗಳನ್ನು ಭೇಟಿ ಮಾಡಿದ ಶಾಸಕರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್-19 ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಕೋವಿಡ್‍ನಿಂದ ಅನೇಕ ಕುಟುಂಬಗಳಲ್ಲಿ ಸಾವು-ನೋವು ಸಂಭವಿಸಿದ್ದು, ಅಂಥ ಕುಟುಂಬಗಳಿಗೆ ನೆರವು ನೀಡಲು ಕಾಂಗ್ರೆಸ್ ಪಕ್ಷ ಸಹಾಯ ಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮದಡಿ ಪಕ್ಷದ ಕಾರ್ಯಕರ್ತರು, ಮುಖಂಡರು ಕ್ಷೇತ್ರದಲ್ಲಿ ಸಂಚರಿಸಿ ಕೋವಿಡ್‍ನಿಂದ ಮೃತಪಟ್ಟ ಹಾಗೂ ಸೋಂಕಿಗೆ ಒಳಗಾದ ಕುಟುಂಬದ ಪ್ರತಿ ಮನೆಗಳಿಗೆ ಭೇಟಿ ನೀಡಿ ಅವರ ಮಾಹಿತಿ ಸಂಗ್ರಹಿಸಿ ಸರ್ಕಾರದಿಂದ ಅವರಿಗೆ ಸೂಕ್ತ ಪರಿಹಾರ ಕೊಡಿಸಲು ಪಕ್ಷ ಶ್ರಮಿಸಲಿದೆ ಎಂದು ಹೇಳಿದರು.
ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಬಮ್ಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಹಮೂದ್ ಕೋಳೂರ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇನಾಯತ್ ಖಾನ್ ಪಠಾಣ್, ಮುಖಂಡರಾದ ಇಲಿಯಾಸ್ ಮನಿಯಾರ್, ರಶೀದ್ ಬೋಲಾಬಾಯಿ, ವೀರಣ್ಣ ದಾಟನಾಳ, ಅಂದಾನಪ್ಪ ಹರಿದರಿ, ಇಬ್ರಾಹಿಂ ಬೇಪಾರಿ, ಅನಿಲ್ ಕಟವಟೆ, ನಿಸಾರ್ ನೀಲಗಾರ್, ಮಂಜುನಾಥ, ಸುರೇಶ ದಾಟನಾಳ, ಇತರರು ಇದ್ದರು.