ಹುಬ್ಬಳ್ಳಿ : ಮುಂಬರುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆದಾಹುಲ್ ಮುಸ್ಲಿಮೀನ್ (ಎಐಎಮ್ ಐಎಮ್ ) ಪಕ್ಷ ಸಿದ್ದಗೊಂಡಿದ್ದು ಕನಿಷ್ಠ 15 ವಾರ್ಡ್ ಗಳಲ್ಲಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಜನರಲ್ ಸೆಕ್ರೆಟರಿ ಲತೀಫ್ ಖಾನ ಪಠಾನ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ನಮ್ಮ ಪಕ್ಷ ಯಾವುದೇ ಮತಗಳನ್ನು ಒಡೆಯುವ ಉದ್ದೇಶ ಹೊಂದಿಲ್ಲ. ನಮ್ಮ ಪಕ್ಷ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಎಲ್ಲ ಧರ್ಮದವರನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿ ಕಡೆಗೆ ಗಮನಹರಿಸುತ್ತೇವೆ. ಜನರ ಅಭಿವೃದ್ಧಿ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಸಿದ್ದಾಂತಗಳ ಆಧಾರದ ಮೇಲೆ ಚುನಾವಣೆ ನಡೆಸಲಾಗುವುದು. ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ನಿರ್ದೇಶನದಂತೆ ರಾಜ್ಯದಲ್ಲಿ ಪಕ್ಷ ಸಂಘಟನೆ ನಡೆಯುತ್ತಿದ್ದು, ಮುಂದಿನ ಎಲ್ಲ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಈಗಾಗಲೇ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸ್ಪರ್ಧಿಸಿರುವ ಪಕ್ಷ, ಗುಲ್ಬರ್ಗಾ, ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇವೆ ಎಂದರು.
ಇನ್ನೂ ಧಾರವಾಡ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಸದಸ್ಯರಿದ್ದು, ಬೂತಮಟ್ಟದಲ್ಲಿ ಪಕ್ಷ ಸಂಘಟನೆ ನಡೆಯುತ್ತಿದೆ. ಎಲ್ಲಿ ನಮ್ಮ ಪಕ್ಷ ಸದೃಢಯಿದೆ ಅಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಅವರುಗಳನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಅಧ್ಯಕ್ಷರು ನಜೀರ್ ಅಹಮ್ಮದ್ ಹೊನ್ಯಾಳ, ಜನರಲ್ ಸೆಕ್ರೆಟರಿ ಶಫಕತ್ ಅಲಿ, ನಗರದ ಅಧ್ಯಕ್ಷ ದಾದಾಪೀರ ಬೆಟಗೇರಿ, ದಲಿತ ಮುಖಂಡ ವಿಜಯ ಗುಂಟ್ರಾಳ, ರಾಕೇಶ್ ಬಸವರಾಜ, ಸಯ್ಯದ್ ಅಜರ್, ಅಬ್ದುಲ್ ಬೇಪಾರಿ, ದಾದಾಪೀರ್ ಕಾಳಗೆ, ಮೈನು ನಾಲಬಂಧ, ಖಾಜಾಸಾಬ ಮುಲ್ಲಾ, ರಿಯಾಜ್ ಕಲ್ಕೇನವರ್, ಇರ್ಫಾನ್ ನಾಲ್ವಾತವಾಡ ಸೇರಿದಂತೆ ಮುಂತಾದವರು ಇದ್ದರು.