ಹುಬ್ಬಳ್ಳಿ: ಕಳೆದ ಬಾರಿಯ ವಿಶೇಷ ಪ್ಯಾಕೇಜ್ ಅನುದಾನವೇ ಇನ್ನೂ ಅನೇಕ ಫಲಾನುಭವಿಗಳ ಕೈ ಸೇರಿಲ್ಲ. ಇನ್ನು ಈ ಬಾರಿಯ ಹೊಸ ಪ್ಯಾಕೇಜ್ ಹಣ ಜನರಿಗೆ ಸಿಗುತ್ತದೆಂಬ ಯಾವುದೇ ವಿಶ್ವಾಸ- ನಂಬಿಕೆ ನಮಗಿಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೋನಾ 2ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ 1250 ಕೋ. ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕಳೆದ ಬಾರಿಯ ಪ್ಯಾಕೇಜ್ನಲ್ಲಿ ಒಟ್ಟು 7.75 ಲಕ್ಷ ಆಟೋ/ ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಅನೇಕ ಚಾಲಕರಿಗೆ ಈವರೆಗೂ ಹಣ ಸಂದಾಯವಾಗಿಲ್ಲ. ಇದೀಗ ಮತ್ತೆ 3000ರೂ. ಅತ್ಯಲ್ಪ ಪರಿಹಾರ ನೀಡುವುದಾಗಿ ಘೋಷಿಸಿದ್ದು, ಪ್ಯಾಕೇಜ್ ಹೆಸರಲ್ಲಿ ಕೇವಲ ಜನರ ಕಣ್ಣೊರೆಸುವ ತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಕಲಾವಿದರು/ ಕಲಾ ತಂಡಗಳಿಗೆ 3000 ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ, ಮಡಿವಾಳ, ಸವಿತಾ, ಕುಂಬಾರ ಇನ್ನಿತರೆ ಸಮಾಜದವರಿಗೆ 2000, ಹೂ, ಹಣ್ಣು, ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರಿಗೆ 10 ಸಾವಿರ ರೂ. ಅತ್ಯಲ್ಪ ಪರಿಹಾರ ಘೋಷಿಸಿದ್ದು, ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.
ಸಹಕಾರಿ ಸಂಘಗಳಲ್ಲಿನ ಸಾಲ ಮರುಪಾವತಿ ದಿನಾಂಕವನ್ನು ಜುಲೈ.31ರವರೆಗೆ ಮುಂದೂಡಿದ್ದು, ಇದರಿಂದ ರೈತರಿಗೆ ಏನೂ ಅನುಕೂಲವಿಲ್ಲ. ನೆರೆಯ ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿ 1250 ಕೋ.ರೂ.ಗೂ ಅಧಿಕ ಮೊತ್ತದ ಪ್ಯಾಕೇಜ್ ಘೋಷಣೆಯಾಗಿದ್ದು, ಸಂಕಷ್ಟದಲ್ಲಿರುವ ಶ್ರಮಿಕ ವರ್ಗಕ್ಕೆ ಹೆಚ್ಚಿನ ಪರಿಹಾರ ಘೋಷಿಸಲಾಗಿದೆ. ಆದರೆ, ರಾಜ್ಯದಲ್ಲಿ ಮಾತ್ರ ಅವೈಜ್ಞಾನಿಕ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.