Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಬಸ್ ಗಳ ಸಂಖ್ಯೆ ಹೆಚ್ಚಳ : ಎಲ್ಲಾ ಸೀಟ್ ಭರ್ತಿಗೆ ಅವಕಾಶ; ಆದಾಯ ಚೇತರಿಕೆ ನಿರೀಕ್ಷೆಯಲ್ಲಿ ಸಾರಿಗೆ ಸಂಸ್ಥೆ

ಬಸ್ ಗಳ ಸಂಖ್ಯೆ ಹೆಚ್ಚಳ : ಎಲ್ಲಾ ಸೀಟ್ ಭರ್ತಿಗೆ ಅವಕಾಶ; ಆದಾಯ ಚೇತರಿಕೆ ನಿರೀಕ್ಷೆಯಲ್ಲಿ ಸಾರಿಗೆ ಸಂಸ್ಥೆ

Spread the love

ಅನ್ ಲಾಕ್ 3.0ರಲ್ಲಿ ಸರ್ಕಾರ ಲಾಕ್ ಡೌನ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿದ್ದು ವಾಣಿಜ್ಯ ವ್ಯವಹಾರಗಳ ಅವಧಿಯನ್ನು ಹೆಚ್ಚಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡಲಾಗಿದೆ.ಹೀಗಾಗಿ ಜನರ ಓಡಾಟ ಸಹಜವಾಗಿಯೇ ಹೆಚ್ಚಾಗಲಿದೆ.ಸೋಮವಾರದಿಂದಲೇ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ ಗಳನ್ನು ಹೆಚ್ಚಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಇದರೊಂದಿಗೆ ಬಸ್ ಗಳಲ್ಲಿ ಎಲ್ಲಾ ಆಸನಗಳ ಭರ್ತಿಗೆ ಅವಕಾಶ ನೀಡಿರುವುದರಿಂದ ಸಾರಿಗೆ ಸಂಸ್ಥೆಯ ಆದಾಯ ವೃದ್ಧಿಗೆ ಬಹಳಷ್ಟು ಸಹಕಾರಿ ಯಾಗಲಿದೆ ಎಂದು ಹುಬ್ಬಳ್ಳಿ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಲಾಕ್ ಡೌನ್ ನಿರ್ಬಂಧಗಳ ಮತ್ತಷ್ಟು ಸಡಿಲಿಕೆ ಹಾಗೂ ಉತ್ತಮ ಮಳೆಯಾಗಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿವೆ.ಕೋವಿಡ್ ಎರಡನೆ ಅಲೆಯಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಬಸ್ ಗಳಲ್ಲಿ ಜನರ ಸಂಚಾರವೂ ಹೆಚ್ಚುತ್ತಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳ ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚಳ ಮಾಡಲಾಗುತ್ತಿದೆ.

ಅನ್ ಲಾಕ್ 2.0 ರಲ್ಲಿ ಜೂ. 21ರಿಂದ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲಾಗಿತ್ತು.ಅದರೆ ಬಸ್ಸಿನ ಒಟ್ಟು ಆಸನಗಳ ಸಾಮರ್ಥ್ಯದ ಶೇಕಡ 50ರಷ್ಟು ಜನರನ್ನು ಮಾತ್ರ ಕರೆದೊಯ್ಯಲು ಅವಕಾಶ ನೀಡಲಾಗಿತ್ತು. ಇದರಿಂದ ಸಾರಿಗೆ ಸಂಸ್ಥೆಗೆ ಹೆಚ್ಚಿನ ನಷ್ಟವಾಗುತ್ತಿತ್ತು. ಆದರೂ ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು
ಹಾಗೂ ಜನ ಸಾಮಾನ್ಯರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಬಸ್ ಗಳ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಅನ್ ಲಾಕ್ 3.0 ರಲ್ಲಿ ವಾಣಿಜ್ಯ ವ್ಯವಹಾರಗಳ ಅವಧಿಯನ್ನು ರಾತ್ರಿ 9ರವರೆಗೆ ಹೆಚ್ಚಿಸಲಾಗಿದೆ. ಬಸ್ಸಿನಲ್ಲಿರುವ ಎಲ್ಲಾ ಆಸನಗಳ ಭರ್ತಿಗೆ ಅವಕಾಶ ನೀಡಲಾಗಿದೆ.ಇದರಿಂದ ಪ್ರತಿ ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಸಾರಿಗೆ ಸಂಸ್ಥೆಯ ಆದಾಯ ಸಂಗ್ರಹ ಹೆಚ್ಚಳಕ್ಕೆ ಸಾಕಷ್ಟು ಸಹಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅನ್ ಲಾಕ್ 2.0 ರಲ್ಲಿನ ಅವಕಾಶಗಳನ್ನು ಬಳಸಿಕೊಂಡು ಜೂ.21ರಿಂದ ಬಸ್ ಸಂಚಾರ ಆರಂಭಿಸಲಾಯಿತು.ಆದರೆ ಜಿಲ್ಲೆಯಲ್ಲಿ ಅನಲಾಕ್ ಗೊಂದಲದಿಂದಾಗಿ ಮೊದಲ ದಿನ ಕೇವಲ 127 ಬಸ್ ಗಳನ್ನು ಮಾತ್ರ ರಸ್ತೆಗಿಳಿಸಲು ಸಾಧ್ಯವಾಗಿತ್ತು.ಮರುದಿನದಿಂದ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.ಎರಡನೆ ದಿನ 195 ಬಸ್ ಗಳು ಸಂಚರಿಸಿದ್ದವು.ನಂತರದಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ ಗಳನ್ನು ಹೆಚ್ಚಿಸಲಾಯಿತು. ಹೈದರಾಬಾದ್ , ಬೆಂಗಳೂರು,ಕಲಬುರಗಿ ಸೇರಿದಂತೆ ರಾತ್ರಿ ಸಾರಿಗೆ ಬಸ್ ಗಳ ಸಂಚಾರ ಶುರು ಮಾಡಲಾಯಿತು.
ಕಳೆದ ವಾರ ಹುಬ್ಬಳ್ಳಿ ವಿಭಾಗದಲ್ಲಿ ನಿತ್ಯ 250 ರಿಂದ 255 ಬಸ್ ಗಳು ಸಂಚರಿಸಿದ್ದವು.40ರಿಂದ45 ಸಾವಿರ ಜನರು ಪ್ರಯಾಣಿಸಿದ್ದಾರೆ. ಸಂಸ್ಥೆಗೆ ನಿತ್ಯ 22ರಿಂದ24 ಲಕ್ಷ ಆದಾಯ ಸಂಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯೊಳಗಡೆ ತಾಲ್ಲೂಕು ಕೇಂದ್ರಗಳು ಮತ್ತು ಪ್ರಮುಖ ಸ್ಥಳಗಳಿಗೆ
ಬಸ್ ಗಳು ಸಂಚರಿಸುತ್ತಿವೆ. ಇನ್ನುಳಿದ ಹಳ್ಳಿಗಳಿಗೆ ಮತ್ತು ಹೊರಜಿಲ್ಲೆಗಳಿಗೆ ಬಸ್ ಸೇವೆ ವಿಸ್ತರಿಸಲಾಗುತ್ತದೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ನೆರೆಯ ಜಿಲ್ಲೆಗಳಾದ ಬೆಳಗಾವಿ, ಗದಗ,ಹಾವೇರಿ, ಶಿರಹಟ್ಟಿ, ಕಲಘಟಗಿ ಕುಂದಗೋಳ, ತಡಸ, ಲಕ್ಷ್ಮೇಶ್ವರ, ಹಾನಗಲ್ ಮುಂತಾದ ಸ್ಥಳಗಳಿಗೆ ನಿರಂತರವಾಗಿ ಬಸ್ಸುಗಳನ್ನು ಬಿಡಲಾಗುತ್ತದೆ.ವಿಜಯಪುರ,ಬಾಗಲಕೋಟೆ,ದಾವಣಗೆರೆ ಮತ್ತಿತರ ಸ್ಥಳಗಳಿಗೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
*ರಾತ್ರಿ ಬಸ್ ಪ್ರಯಾಣಕ್ಕೆ ನಿರ್ಬಂಧವಿಲ್ಲ*
ಅನಲಾಕ್ 3.0 ರಲ್ಲಿ ವಾಣಿಜ್ಯ ವ್ಯವಹಾರ ಗಳಿಗೆ ಬೆಳಿಗ್ಗೆಯಿಂದ ರಾತ್ರಿ 9ರವರೆಗೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿದೆ.ಆದರೆ ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕ ಬಸ್ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ದೂರ ಮಾರ್ಗದ ಬಸ್ ಗಳ ಸಂಚಾರ ದಿನಪೂರ್ತಿ ಲಭ್ಯವಿರುತ್ತದೆ. ಜನರು ತಮ್ಮ ಪ್ರಯಾಣದ ಟಿಕೆಟ್, ಅಧಿಕೃತ ದಾಖಲೆ ಮತ್ತು ಗುರುತಿನ ಪತ್ರದೊಂದಿಗೆ ನಿರಾತಂಕವಾಗಿ ಪ್ರಯಾಣ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಪೂರ್ವದಲ್ಲಿ ಜಿಲ್ಲೆಯೊಳಗೆ, ಅಂತರ ಜಿಲ್ಲೆಗಳು ಹಾಗೂ ಅಂತರ ರಾಜ್ಯಗಳ ಪ್ರಮುಖ ಸ್ಥಳಗಳಿಗೆ ಯಾವುದೆ ನಿರ್ಬಂಧವಿಲ್ಲದೆ ದಿನದ 24 ಗಂಟೆಯೂ ಬಸ್ಸುಗಳು ಸಂಚರಿಸುತ್ತಿದ್ದವು. 419 ಅನುಸೂಚಿಗಳಲ್ಲಿ ಪ್ರತಿದಿನ 1.90 ಲಕ್ಷ ಕಿ.ಮೀ.ಗಳಷ್ಟು ಕ್ರಮಿಸುತ್ತಿದ್ದವು. ವಿವಿಧ ರಿಯಾಯಿತಿ ಪಾಸು ಪ್ರಯಾಣಿಕರು ಸೇರಿದಂತೆ 1.30 ರಿಂದ 1.45 ಲಕ್ಷಗಳಷ್ಟು ಸಾರ್ವಜನಿಕ ಪ್ರಯಾಣಿಕರು ಹಾಗೂ 45 ಸಾವಿರಗಳಷ್ಟು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಸಂಸ್ಥೆಗೆ ನಿತ್ಯ 50 ರಿಂದ 55 ಲಕ್ಷ ರೂ. ಸಾರಿಗೆ ಆದಾಯ ಸಂಗ್ರಹಣೆ ಆಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

*ಬಸ್, ನಿಲ್ದಾಣ ಸ್ಯಾನಿಟೇಷನ್*
ಕೋವಿಡ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣ, ಕುಂದಗೋಳ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಬಸ್ ನಿಲ್ದಾಣಗಳನ್ನು ಸ್ವಚ್ಚಗೊಳಿಸಿ ಸ್ಯಾನಿಟೇಷನ್ ಮಾಡಲಾಯಿತು.

ನಿತ್ಯ ಸಂಚಾರ ಮುಗಿಸಿ ಡಿಪೋಗಳಿಗೆ ಹಿಂದಿರುಗುವ ಎಲ್ಲಾ ಬಸ್ ಗಳನ್ನು ಸ್ಯಾನಿಟೇಷನ್ ಮಾಡಲಾಗುತ್ತದೆ.ಬಸ್ ಡಿಪೋ ಮತ್ತು ನಿಲ್ದಾಣಗಳನ್ನು ನಿಯಮಿತವಾಗಿ ಸ್ಯಾನಿಟೇಷನ್ ಮಾಡಲಾಗುತ್ತದೆ.
ಲಸಿಕೆ ಪಡೆದಿರುವ ಸಿಬ್ಬಂದಿಗೆ ಮಾತ್ರ ಕರ್ತವ್ಯ ನಿಯೋಜನೆ ಮಾಡಲಾಗುತ್ತದೆ.
ಬಸ್ ಮತ್ತು ನಿಲ್ದಾಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸಾಕಷ್ಟು ಬಸ್ ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಪ್ರಯಾಣಿಕರು ಅನಾವಶ್ಯಕವಾಗಿ ಗುಂಪು ಸೇರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡಲು ಸಂಸ್ಥೆಯೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]