ಹುಬ್ಬಳ್ಳಿ : ಜಿಲ್ಲೆಯಲ್ಲಿ ಲಸಿಕೆ ವಿತರಣೆ ಗೊಂದಲ ಮುಂದುವರೆದಿದ್ದು, ಇಂದು ಕೂಡಾ ಕಿಮ್ಸ್ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಲಸಿಕೆ ಸ್ಟಾಕ್ ಇಲ್ಲದೇ ಜನರು ಸರದಿ ಸಾಲಿನಲ್ಲಿ ನಿಂತು ಲಸಿಕೆ ದೊರೆಯದೇ ವಾಪಸ್ ಮರಳುವಂತಾಗಿದ್ದು, ಸಾರ್ವಜನಿಕರು ಹಿಡಿ ಶಾಪ ಹಾಕುವಂತೆ ಆಗಿದೆ.
ಈಗಾಗಲೇ ಕೊರೊನಾ ಎರಡನೇ ಅಲೆಗೆ ಜನ ಜೀವನ ತತ್ತರಿಸಿದ್ದು, ಮೂರನೇ ಅಲೆಯ ಭೀಕರ ಪರಿಸ್ಥಿತಿಯಿಂದ ಬಚಾವಾಗಲು ಲಸಿಕೆ ಪಡೆಯುದೊಂದೇ ಪರಿಹಾರ ಎಂದು ತಜ್ಞರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಲಸಿಕೆ ಪಡೆಯಲು ಮುಂದಾಗುತ್ತಿದ್ದು, ಪರಿಣಾಮ ಜಿಲ್ಲೆಯಲ್ಲಿ ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ, ಆದರೆ ಪೂರೈಕೆ ಇಳಿಮುಖ ಕಂಡಿದೆ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಸಿಗುತ್ತಿಲ್ಲ. ಹಿರಿಯ ನಾಗರೀಕರು ಹಾಗೂ ಅನಾರೋಗ್ಯ ಪೀಡಿತರು ಲಸಿಕೆ ಪಡೆಯಲು ಆಸ್ಪತ್ರೆಗೆ ಬಂದು ವಾಪಾಸ್ಸಾಗುತ್ತಿದ್ದಾರೆ. ಮೊದಲೇ ರಿಜಿಸ್ಟರ್ ಮಾಡಿಕೊಂಡು ಬಂದರೂ ಸಹ ಲಸಿಕೆ ಸಿಗುತ್ತಿಲ್ಲ ಎಂಬ ಆರೋಗಳು ಸಾಲು ಸಾಲಾಗಿ ಕೇಳಿ ಬರುತ್ತಿದೆ.
ಈ ಮೊದಲು ಧಾರವಾಡ ಜಿಲ್ಲೆಯಲ್ಲಿ ಒಂದು ಲಸಿಕಾ ಕೇಂದ್ರಕ್ಕೆ 300 ಡೋಸ್ನಂತೆ ನಿತ್ಯ 8 ರಿಂದ 10 ಸಾವಿರ ಡೋಸ್ ವಿತರಣೆ ಮಾಡುತ್ತಿತ್ತು. ಆದರೆ ಸದ್ಯ ಒಂದು ಲಸಿಕಾ ಕೇಂದ್ರಕ್ಕೆ 100 ಡೋಸ್ ಮಾತ್ರ ವಿತರಣೆ ಮಾಡುತ್ತಿದ್ದು, ಅದು ಕೂಡಾ ಸಪ್ಲೈ ಆದರೆ ಮಾತ್ರ ವ್ಯಾಕ್ಸಿನ್ ಎಂಬುವಂತಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆ ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲೂ ಲಸಿಕೆ ಕೊರತೆ ಉಂಟಾಗಿದೆ. ಕಳೆದ ಎರಡು ಮೂರು ದಿನಗಳಿಂದ ಸಾರ್ವಜನಿಕರು ಆಸ್ಪತ್ರೆಯ ಬಾಗಿಲಿಗೆ ಬಂದು ಹಿಡಿಶಾಪ ಹಾಕುತ್ತ ಮರಳುತ್ತಿರುವುದು ಕಂಡುಬಂದಿದೆ.