ಹುಬ್ಬಳ್ಳಿ : ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳನ್ನು ಅಧಿಕಾರಿಗಳ ಜೊತೆ ಪರಿಶೀಲಿಸಿದರು.
ತೋಳಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೆರೆ ದಂಡೆ ಸುತ್ತ ಬೆಳೆದ ಕಳೆ ತೆಗೆಯಲು ಸೂಚಿಸಿದರು. ನಂತರ ವಾಯುವಿಹಾರಕ್ಕೆ ಬಂದವರ ಜೊತೆ ಚರ್ಚಿಸಿದರು.
ಕೆರೆ ಪಕ್ಕದ ರೇಣುಕಾನಗರದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಮಾನಸಗಿರಿ ಕಾಲೊನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅರೆಬರೆ ಕಾಮಗಾರಿ ಗಮನಿಸಿದ ಸಚಿವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸಂಜೆಯೊಳಗೆ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಿ, ಅದರ ಫೋಟೊ ಕಳುಹಿಸಬೇಕು ಎಂದು ಎಂಜಿನಿಯರ್’ಗೆ ತಾಕೀತು ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಮಹೇಶ ಬುರ್ಲಿ ಇದ್ದರು.