ಹುಬ್ಬಳ್ಳಿ: ರಾಜ್ಯದಲ್ಲಿ ಕೆಲವು ಚರ್ಚ್‌ಗಳು ಹಿಂದೂಗಳನ್ನು ಮತಾಂತರ ಮಾಡುತ್ತಿವೆ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆಯ ಮುಖಂಡರು, ಶೀಘ್ರ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೊಳಸಿಬೇಕೆಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ತಹಶಿಲ್ದಾರರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಬಂದ ಅವರು, ರಾಜ್ಯದಲ್ಲಿ ಶೀಘ್ರ ಮತಾಂತರ ನಿಷೇಧ ಕಾಯಿದೆ ಜಾರಿಗೆಗೊಳಿಸಬೇಕೆಂದು ಆಗ್ರಹಿಸಿ ತಹಶಿಲ್ದಾರರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಕಠಾರೆ ಮಾತನಾಡಿ, ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯ ಮತಾಂತರ ಮಾಡಲು ಯತ್ನಿಸುತ್ತಿದೆ. ಆರೋಗ್ಯ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಅವರಿಗೆ ಆಮಿಷವೊಡ್ಡಿ ಮುಗ್ಧ ಜನರನ್ನು, ದಲಿತರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಯತ್ನವನ್ನು ನಾವು ಖಂಡಿಸುತ್ತೇವೆ. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ಸ್ವತಂತ್ರವಾಗಿ ಬದಲು ಎಲ್ಲರೂ ಅರ್ಹರು. ಹಾಗಿದ್ದರೂ, ಜನರು ಇನ್ನೂ ಗುಲಾಮಿತನದಲ್ಲಿ ಬದುಕಬೇಕು ಎಂಬ ಉದ್ದೇಶದಿಂದ ಮತಾಂತರ ಮಾಡಲಾಗುತ್ತಿದೆ. ಮತಾಂತರ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕಾಯಿದೆ ಜಾರಿಗೆ ತರಬೇಕು. ಈ ಮೂಲಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ನಗರದ ಅಧ್ಯಕ್ಷ ಗಣೀಶ ಜಿತೂರಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಬೂದುರ, ಕಾರ್ಯದರ್ಶಿ ಮಂಜುನಾಥ ಜಾಧವ ಸೇರಿದಂತೆ ಮುಂತಾದವರು ಇದ್ದರು.