ಹುಬ್ಬಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಲು ರೈಲ್ವೆ ಅಧಿಕಾರಿಗಳು ಟ್ರೆಸ್ ಪಾಸ್ ಹೆಸರಿನಲ್ಲಿ ತೆರವುಗೊಳಿಸುವ ಷಡ್ಯಂತ್ರ ಮಾಡುತ್ತಿದ್ದು, ಹಾಗೇನಾದರೂ ನಡೆದಲ್ಲಿ ಉಂಟಾಗುವ ಅಶಾಂತಿ ಹಾಗೂ ಕಾನೂನು ಭಂಗಕ್ಕೆ ವಿಭಾಗೀಯ ರೈಲ್ವೆ ಅಧಿಕಾರಿಗಳೇ ಹೊಣೆಗಾರರು ಎಂದು ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ 131 ನೇ ಜನ್ಮದಿನದ ಹಿನ್ನೆಲೆಯಲ್ಲಿ ಏ.14 ರಂದು ಅವರ ಅನುಯಾಯಿಗಳು ಗದಗ ರಸ್ತೆಯ ಗಾಂಧಿವಾಡದಲ್ಲಿನ ರೈಲ್ವೆ ಜಾಗದಲ್ಲಿ ಪ್ರತಿಮೆ ಸ್ಥಾಪಿಸಿದರು. ಆ ನಂತರ ಏಕಾಏಕಿ ಕೇಶ್ವಾಪುರ ಪೋಲಿಸರು ಹಾಗೂ ಆರ್ ಪಿಎಫ್ ಪೋಲಿಸರು ಮೂರ್ತಿ ತೆರವುಗೊಳಿಸಿದರು. ಆ ಬಳಿಕ ಹೋರಾಟದ ನಂತರ ಮತ್ತೆ ಮೂರ್ತಿಯನ್ನು ಅಧಿಕಾರಿಗಳು ಅದೇ ಸ್ಥಳದಲ್ಲಿ ನಿರ್ಮಿಸಿದ್ದರು. ಆದರೆ ಇದೀಗ ರೈಲ್ವೆ ಅಧಿಕಾರಿಗಳು ಕಾನೂನು ಹೆಸರಿನಲ್ಲಿ ಬಲಪ್ರಯೋಗ ಮಾಡಲು ಮುಂದಾಗುತ್ತಿದ್ದಾರೆ. ಇದು ಖಂಡನೀಯ ಎಂದರು.
ಈಗಾಗಲೇ ರೈಲ್ವೆ ಜಾಗದಲ್ಲಿ ಹಲವಾರು ಮಹಾನ್ ವ್ಯಕ್ತಿಗಳ ಪ್ರತಿಮೆಗಳಿವೆ. ಅದರಂತೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ರೈಲ್ವೆ ಅಧಿಕಾರಿಗಳು ಅನುಮತಿ ನೀಡಬೇಕು. ಅಲ್ಲದೇ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಕರಣವನ್ನು ಇತ್ಯರ್ಥ ಮಾಡಬೇಕು. ಅದನ್ನು ಬಿಟ್ಟು ಅಂಬೇಡ್ಕರ್ ಮೂರ್ತಿ ತೆರವು ಕಾರ್ಯಕ್ಕೆ ಮುಂದಾದರೇ ಹುಬ್ಬಳ್ಳಿಯಲ್ಲಿ ಮತ್ತೊಂದು ಅಶಾಂತಿಗೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಇದಲ್ಲದೇ ರೈಲ್ವೆಯ ಹಠವಾದಿ ದೋರಣೆ ಹಾಗೂ ಜಾತಿವಾದಿತನವನ್ನು ಖಂಡಿಸಿ ರೈಲ್ವೆ ಇಲಾಖೆ ಎದುರು ಮತ್ತು ಕೇಂದ್ರ ಸಚಿವರ ನಿವಾಸದ ಎದುರು ಬೇಡಿಕೆ ಅನುಷ್ಠಾನದವರೆಗೆ ಅನಿರ್ಧಿಷ್ಟಾವಧಿ ಹೋರಾಟ ಮಾಡಬೇಕಾಗುತ್ತದೆ ಎಂದು ಉಳ್ಳಿಕಾಶಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯೆ ಸುವರ್ಣಲತಾ ಕಲ್ಲಕುಂಟ್ಲಾ, ಪ್ರಭು, ಜ್ಞಾನೇಶ್ವರ ಕಂದಿ, ಲೋಹಿತ್ ಗಾಮನಗಟ್ಟಿ, ಹನುಮಂತ ತಳವಾರ ಸೇರಿದಂತೆ ಮುಂತಾದವರು ಇದ್ದರು.