ಹುಬ್ಬಳ್ಳಿ : ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ಬರಪ್ಪ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದು, ಸಂಜೆ ಅವರು ತಮ್ಮ ರಾಜೀನಾಮೆ ನೀಡುವ ತೀರ್ಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಪ್ರೇರಣೆಯಿಂದ ಈಶ್ವರಪ್ಪ ಅವರು ರಾಜಿನಾಮೆ ನೀಡುತ್ತಿದ್ದಾರೆ ಎಂದರು.
ಪ್ರಕರಣದಲ್ಲಿ ನೂರಕ್ಕೆ ನೂರರಷ್ಟು ನಿರಪರಾಧಿ ಇದ್ದೇನೆ. ಆದಷ್ಟು ಬೇಗನೆ ತನಿಖೆ ಮಾಡಿಸಿ. ಆರೋಪಮುಕ್ತನಾಗುವ ವಿಶ್ವಾಸ ನನಗಿದೆ ಎಂದು ಈಶ್ವರಪ್ಪ ಅವರು ತಿಳಿಸಿದ್ದಾರೆ ಎಂದು ಸಿಎಂ ಹೇಳಿದರು.
ಈಶ್ವರಪ್ಪ ಅವರ ಮೇಲಿನ ಆರೊಪ ಷಡ್ಯಂತ್ರವೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ತನಿಖೆಯಿಂದ ಎಲ್ಲ ಸತ್ಯಾಸತ್ಯತೆ ಹೊರಬೀಳಲಿದೆ. ಎಲ್ಲ ಆಯಾಮದಿಂದಲೂ ತನಿಖೆಯಾಗುವುದರಿಂದ ಸತ್ಯಾಂಶ ಹೊರಬೀಳಲಿದೆ ಎಂದರು.
ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಬಂಧಿಸಬೇಕು ಎನ್ನುವ ಒತ್ತಡ ಕಾಂಗ್ರಸ್ ದಿಂದ ಕೇಳಿಬರುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿ, ಪೊಲೀಸರಿಗೆ ತಮ್ಮ ಕೆಲಸ ಮಾಡಲು ಬಿಡಬೇಕು. ಈ ಹಿಂದೆ ಕಾಂಗ್ರೆಸ್ ನವರು ಜಾರ್ಜ್ ಅವರನ್ನು ಬಂಧಿಸಿದ್ದರೆ ಎಂದು ಪ್ರಶ್ನಿಸಿದ ಅವರು, ಜಾರ್ಜ್ ಅವರನ್ನು ಪೊಲೀಸರೂ ಬಂಧಿಸಲಿಲ್ಲ, ಸಿಬಿಐ ನವರೂ ಬಂಧಿಸಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀರ್ಮಾನ ಮಾಡುತ್ತಾರೆ. ವಿರೋಧ ಪಕ್ಷದವರು ತನಿಖಾಧಿಕಾರಿ, ಜಡ್ಜ್ ಆಗುವ ಅವಶ್ಯಕತೆ ಇಲ್ಲ ಎಂದರು.
ಈ ಪ್ರಕರಣದಲ್ಲಿ ಮುಕ್ತವಾಗಿ ತನಿಖೆಯಾಗಲು ಬಿಡಿ, ಎಲ್ಲ ಸತ್ಯವೂ ಹೊರಬರುತ್ತದೆ ಎಂದರು.
ಈಶ್ವರಪ್ಪ ಅವರ ರಾಜಿನಾಮೆಯಿಂದ ಸರ್ಕಾರಕ್ಕೆ ಹಿನ್ನಡೆಯಾಗಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಕರಣದ ತನಿಖೆ ನಂತರ ಈಶ್ವರಪ್ಪ ಅವರು ಮುಕ್ತರಾಗುವ ವಿಶ್ವಾಸವಿಟ್ಟಿದ್ದಾರೆ. ಇದರಲ್ಲಿ ಹಿನ್ನಡೆ ಮುನ್ನಡೆ ಮಾತೇ ಇಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.