ಹುಬ್ಬಳ್ಳಿ : ವಾರಸುದಾರರಿಲ್ಲದೇ ನಿನ್ನೆ ಏ.5 ರಂದು ಇಲ್ಲಿನ ಬಿಡನಾಳ ರುದ್ರಭೂಮಿಯಲ್ಲಿ ಶವವೊಂದನ್ನು ಹೂಳಲಾಗಿತ್ತು. ಅಂತ್ಯಕ್ರಿಯೆ ಬಳಿಕ ವಾರಸುದಾರರು ಪತ್ತೆಯಾದ್ದರಿಂದ ಇಂದು ಶವ ಹೊರತೆಗದು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಹುಬ್ಬಳ್ಳಿಯ ಪೆಂಡಾರ ಗಲ್ಲಿಯ ನಿವಾಸಿಯಾಗಿದ್ದ ಮುಜಾಫರ್ ಕಲಾದಗಿ (31) ಅವರು ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಕುರಿತು ಏ.5 ರಂದು ಸಾರ್ವಜನಿಕರೊಬ್ಬರ ಮಾಹಿತಿ ಆಧರಿಸಿ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.ಪಾರ್ಥಿವ ಶರೀರವು ಶವಾಗಾರದಲ್ಲಿರಿಸುವ ಸ್ಥಿತಿಯಲ್ಲಿ ಇಲ್ಲದ ಕಾರಣ, ನಿನ್ನೆ ಏ.5 ರಂದು ಬಿಡನಾಳ ರುದ್ರಭೂಮಿಯಲ್ಲಿ ಮಹಾನಗರಪಾಲಿಕೆಯ ಪೌರಕಾರ್ಮಿಕರು ಅಂತ್ಯಕ್ರಿಯೆ ನೆರವೇರಿಸಿದ್ದರು. ಅಂತ್ಯಕ್ರಿಯೆ ನಡೆದ ಬಳಿಕ ರಾತ್ರಿ ಬೈಕ್ ಹಾಗೂ ಇತರೆ ವಸ್ತುಗಳನ್ನು ಮೃತನ ತಂದೆ ಅಬ್ದುಲ್ ಮುನಾಫ್ ಕಲಾದಗಿ ಅವರು ಗುರುತಿಸಿ, ಪಾರ್ಥಿವ ಶರೀರ ತಮ್ಮ ಮಗನದೆಂದು ಖಚಿತ ಪಡಿಸಿದರು. ಶವವನ್ನು ಇಸ್ಲಾಂ ಧಾರ್ಮಿಕ ಸಾಂಪ್ರದಾಯಗಳ ಪ್ರಕಾರ ಸಂಸ್ಕಾರ ಮಾಡಲು ಬಯಸಿದ್ದರಿಂದ ಹೂಳಲ್ಪಟ್ಟ ಶವವನ್ನು ಇಂದು ಹೊರತೆಗೆದು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು ಎಂದು ಉಪವಿಭಾಗಾಧಿಕಾರಿ ಅಶೋಕ ತೇಲಿ ತಿಳಿಸಿದರು.
ಮೃತ ಮುಜಾಫರ್ ಅವರ ಬೈಕ್ ಉಣಕಲ್ ಕೆರೆ ಬಳಿ ದೊರೆತ ನಂತರ ಅದು ನನ್ನ ಮಗನ ಶವ ಎಂದು ತಿಳಿಯಿತು. ಉಪವಿಭಾಗಾಧಿಕಾರಿಯವರಿಗೆ ಮನವಿ ಮಾಡಿಕೊಂಡ ನಂತರ ಕಾನೂನು ಪ್ರಕಾರ ಇಂದು ಮಗನ ಶವವನ್ನು ನನಗೆ ಹಸ್ತಾಂತರ ಮಾಡುತ್ತಿದ್ದಾರೆ, ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಮತ್ತೊಮ್ಮೆ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಅಬ್ದುಲ್ ಮುನಾಫ್ ಕಲಾದಗಿ ದುಃಖತಪ್ತರಾಗಿ ಹೇಳಿದರು.
ಹುಬ್ಬಳ್ಳಿ ಶಹರ ತಹಶೀಲ್ದಾರ ಶಶಿಧರ್ ಮಾಡ್ಯಾಳ, ಗ್ರಾಮೀಣ ತಹಸೀಲ್ದಾರ ಪ್ರಕಾಶ್ ನಾಶಿ,ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು,ಧಾರ್ಮಿಕ ಮುಖಂಡರು ಹಾಜರಿದ್ದರು.