ಹುಬ್ಬಳ್ಳಿ : ಗದಗ-ಹುಬ್ಬಳ್ಳಿ ನಡುವಿನ ನೆಲವಡಿ ಗ್ರಾಮದ ಹತ್ತಿರ ನಿರ್ಮಿಸಿರುವ ಸುಂಕ ಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳನ್ನು ಧಿಕ್ಕರಿಸಿ ಅಕ್ರಮವಾಗಿ ಸುಂಕ ವಸೂಲಿ ಮಾಡಲಾಗುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಟೋಲ್ ಸಂಗ್ರಹ ಕುರಿತು ಪರಿಶೀಲನೆ ಮಾಡಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಹೈವೆ ಅಭಿವೃದ್ಧಿ ಕಾಮಗಾರಿಗಳು ನಡೆದರೇ ಅದಕ್ಕೆ ಅದರದೇ ಆದಂತಹ ಕಾನೂನು ನಿಯಮಗಳಿವೆ. ಇದು ಕಾರ್ಯರೂಪಕ್ಕೆ ತರುವುದು ಸರ್ಕಾರ ನಡೆಸುವವರ ಆದ್ಯ ಕರ್ತವ್ಯ. ಆದರೆ ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-67 ರಲ್ಲಿ ಇವು ಯಾವ ನಿಮಯಗಳು ಪಾಲನೆಯಾಗದೇ ಅಕ್ರಮವಾಗಿ ಸುಂಕ ಕಟ್ಟೆ ಮೂಲಕ ಹಣ ವಸೂಲಿ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹುಬ್ಬಳ್ಳಿ-ಹೊಸಪೇಟೆ ಮಧ್ಯೆ 3915 ಕೋಟಿ ರೂಪಾಯಿಗಳಲ್ಲಿ 143.78 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಿಸಲು 2011-12 ರಲ್ಲಿ ಯೋಜನೆ ಹಾಕಲಾಗಿತ್ತು. ಆದರೆ 2016 ರಲ್ಲಿ ಆರ್ಥಿಕ ಇಲಾಖೆಯ ಅನುಮತಿಯೊಂದಿಗೆ ಪ್ರಾರಂಭಿಸಿ ಮುಂದಿನ ಎರಡು ವರ್ಷಗಳಿಂದ ಕಾಮಗಾರಿ ಪೂರ್ಣಗೊಳಿಸಿ ಜನಸಾಮಾನ್ಯರ ಓಡಾಟಕ್ಕೆ ಅನುವು ಮಾಡಿಕೊಡಬೇಕೆಂಬು ನೋಟಿಫಿಕೇಶನಲ್ಲಿ ಹೇಳಲಾಗಿತ್ತು. ಆದರೆ ಕಾಮಗಾರಿ ಪ್ರಾರಂಭವಾಗಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದರು ಈವರೆಗೆ ಶೇ. 45.11 ರಷ್ಟು ಕಾಮಗಾರಿ ಮಾಡಲಾಗಿದೆ. ಇನ್ನು 1625 ಕೋಟಿ ರೂಪಾಯಿ ಕಾಮಗಾರಿ ನಡೆಯಬೇಕಿದ್ದು, ಸರ್ವಿಸ್ ರಸ್ತೆ ಸೇರಿದಂತೆ ಮುಂತಾದ ಕಾಮಗಾರಿಗಳು ಆಗಬೇಕಿದೆ. ಆದರೂ ಟೋಲ್ ಏಜೆನ್ಸಿ ಏಕಾಏಕಿ ಟೋಲ್ ಹಾಕಿ ಜನರಿಂದ ಶುಲ್ಕ ವಸೂಲಿಗೆ ಮುಂದಾಗಿದೆ. ಪರಿಣಾಮ ಶಿರಗುಪ್ಪಿ, ಇಂಗಳಹಳ್ಳಿ, ಅಂತೂರ-ಬೆಂತೂರ ಅಣ್ಣಿಗೇರಿ, ಸೈದಾಪುರ, ಶಿರಹಟ್ಟಿ, ಮಜ್ಜಿಗುಡ್ಡಾ, ಭದ್ರಾಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಕೂಡಲೇ ಜಿಲ್ಲಾಧಿಕಾರಿಗಳು, ಎಸ್.ಪಿ ಸೇರಿದಂತೆ ಮುಂತಾದ ಅಧಿಕಾರಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿ. ಈ ಕ್ಷಣದಿಂದ ಟೋಲ್ ಸಂಗ್ರಹ ಕೈಬಿಡಬೇಕು. ಈವರೆಗೆ ಸಂಗ್ರಹಿಸಿದ ಟೋಲ್ ಹಣವನ್ನು ವಾಪಾಸ್ ಜನರಿಗೆ ಮರುಪಾವತಿ ಮಾಡಬೇಕು. ಈ ಎಲ್ಲ ಕಾರ್ಯಗಳು ಮುಂದಿನ ಹತ್ತು ದಿನಗಳಲ್ಲಿ ಆಗಬೇಕು. ಇಲ್ಲದೇ ಹೋದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ನೆಲವಡಿ ಗ್ರಾಮಸ್ಥ ಪ್ರದೀಪ ಕೆಂಚನಗೌಡ್ರ ಇದ್ದರು.