ಹುಬ್ಬಳ್ಳಿ : ಎಲಿಜೆಬೆತ್ ಶ್ರೀನಿವಾಸ ಪ್ಯಾಟ್ಟೋನ ನಾಯ್ಡು ಚಾರಿಟೇಬಲ್ ಟ್ರಸ್ಟ್ ಲೋಕಾರ್ಪಣೆ , ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ಹಾಗೂ ಸನ್ಮಾನ ಸಮಾರಂಭ ಶನಿವಾರ ಇಲ್ಲಿನ ಜಯಚಾಮರಾಜನಗರದ ಅನಂತ ರೆಸಿಡೆನ್ಸಿಯಲ್ಲಿ ನಡೆಯಿತು.
ಸಮಾರಂಭಕ್ಕೆ ಹುಬ್ಬಳ್ಳಿಯ ಚಿನ್ಮಯ ಮಿಶನ್‍ನ ಆಚಾರ್ಯ ಪೂಜ್ಯ ಸ್ವಾಮಿ ಕೃತಾತ್ಮನಂದಜೀ ಮುಖ್ಯತಿಥಿಗಳಾಗಿ ಆಗಮಿಸಿದರು. ವಿಭವ ಇಂಡ್‍ಸ್ಟ್ರಿಸ್ ಸಿಇಓ ಹಾಗೂ ಅಧಮ್ಯ ಚೇತನ್ ಫೌಂಡೇಶನ್‍ನ ಚೇರ್ಮನ್ ನಂದಕುಮಾರ ಹಾಗೂ ಹುಬ್ಬಳ್ಳಿ ಮಜೇಥಿಯಾ ಫೌಂಡೇಶನ್‍ನ ಚೇರ್ಮನ್ ಜಿತೇಂದ್ರ ಮಜೇಥಿಯಾ ಗೌರವ ಅತಿಥಿಗಳಾಗಿ ಪಾಲ್ಗೊಂಡು ಲೋಕಾರ್ಪಣೆಗೊಂಡ ಟ್ರಸ್ಟ್ ಗೆ ಶುಭಕೋರಿದರು.
ಇನ್ನು ವಿಜಯಪುರ ಜಿಲ್ಲೆಯ ಮೂಲದವರಾದ ಶ್ರೀನಿವಾಸ ನಾಯ್ಡು ಅವರ ತಂದೆ ಗದಗನಲ್ಲಿ ಡಿವೈಎಸ್‍ಪಿಯಾಗಿ ಕೆಲಸ ಮಾಡುತ್ತಿದ್ದರಿಂದ ಅಲ್ಲಿಯೇ ಕೆಲವರ್ಷಗಳವರೆಗೆ ನೆಲೆಸಿದ್ದರು, ಹುಬ್ಬಳ್ಳಿಯ ಆಗಿನ ಕೆಎಂಸಿಯ 2ನೇ ಬ್ಯಾಚ್‍ನ ವಿದ್ಯಾರ್ಥಿಯಾಗಿ ಎಂಬಿಬಿಎಸ್ , ಪಿಡಿಯಾಟ್ರಿಕ್ಸ್‍ನಲ್ಲಿ (ಚಿಕ್ಕ ಮಕ್ಕಳ ತಜ್ಞ ) ಎಂ.ಡಿ ಪಡೆದು 1991 -72ರಲ್ಲಿ ಅಮೆರಿಕದ ಚಿಕ್ಯಾಗೋ ನಗರದ ಇಲಿಷಿಯಾ ಲೂದರ್ನ ಜನರಲ್ ಆಸ್ಪತ್ರೆಯ ನಿರ್ದೇಶಕರಾಗಿ, ನಂತರ ಅದೇ ಆಸ್ಪತ್ರೆಯ ಚೇರ್ಮನ್‍ರಾಗಿ , ಅದೇ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿದ್ದ ಐರಿಷ್ ಪ್ರಜೆ ಎಲಿಜೆಬೆತ್ ಪ್ಯಾಟ್ಟೋನ ಅವರನ್ನು ವಿವಾಹವಾಗಿ ತುಂಬು ಜೀವನ ನಡೆಸಿದ್ದರು. ವಿದೇಶದಲ್ಲಿ ನೆಲೆಸಿದ್ದರೂ ಸಹ ಡಾ. ಶ್ರೀನಿವಾಸ ಅವರು ಸ್ವದೇಶ ಹಾಗೂ ಹುಟ್ಟಿ ಬೆಳೆದ ಪ್ರದೇಶಗಳ ಬಗ್ಗೆ ಅಪಾರ ಪ್ರೇಮ ಹೊಂದಿದ್ದರಲ್ಲದೇ ಪ್ರತಿವರ್ಷವೂ ಸ್ವದೇಶ ಭಾರತಕ್ಕೆ ಭೇಟಿ ನೀಡುತ್ತಿದ್ದರು, ಆ ವೇಳೆ ಅವರು ಇಲ್ಲಿ ಸಮಾಜ ಮುಖಿ ಕೆಲಸಗಳು , ಮಂದಿರಗಳ ಜೀರ್ಣೋದ್ದಾರ, ಪೊಲೀಸ್ ಸಿಬ್ಬಂದಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಶಿಷ್ಯ ವೇತನ, ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದರು. ಇಷ್ಟೇ ಅಲ್ಲದೇ ಸಮಾಜ ಸೇವೆಗಾಗಿ ಒಂದು ಚಾರಿಟೇಬಲ್ ಟ್ರಸ್ಟ್ ರಚಿಸಿರುವ ಕನಸು ಹೊಂದಿದ್ದರು. ನಂತರ ಒಂದೇ ವರ್ಷದಲ್ಲಿ ಡಾ. ಶ್ರೀನಿವಾಸ ಹಾಗೂ ಪತ್ನಿ ಎಲಿಜೆಬೆತ್ ಮೃತರಾದರು. ಈಗ ಅವರ ಕನಸನ್ನು ನನಸಾಗಿಸಲು ಅವರ ಸಹೋದರ ಸಂಬಂಧಿಯಾದ ಅಶೋಕ ನಾಯ್ಡು,ಪಾಂಡುರಂಗ ನಾಯ್ಡು , ಆತ್ಮೀಯರಾದ ಗಿರೀಶ ಉಪಾಧ್ಯಯ ಹಾಗೂ ಸಂಗಮನಾಥ ಪಾಟೀಲ ಅವರುಗಳು ಈ ಟ್ರಸ್ಟ್ ರಚಿಸಿ ಸಮಾಜ ಮುಖಿ ಕಾರ್ಯಗಳಿಗೆ ಮುಂದಾಗಿದ್ದಾರೆ. ಈ ನಾಲ್ವರು ಟ್ರಸ್ಟಿಗಳಾಗಿದ್ದಾರೆ.