ಹುಬ್ಬಳ್ಳಿ: ಹೋಳಿ ಹಬ್ಬದ ಪ್ರಯುಕ್ತ ಮಾ. 20 ರಂದು ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಈ ಹಿಂದೆ ಹಲವಾರು ವರ್ಷಗಳಿಂದ ವಿವಿಧ ಗ್ರಾಮಗಳ ಹಾಗೂ ಹುಬ್ಬಳ್ಳಿ ನಗರದ ವಿವಿಧ ಪ್ರದೇಶಗಳ ಜಗ್ಗಲಗಿ ತಂಡಗಳ ಸಹಾಯ ಹಾಗೂ ಸಹಕಾರದೊಂದಿಗೆ ಜಗ್ಗಲಗಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದು, ಅದರಂತೆ ಈ ವರ್ಷವು ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಮೂರುಸಾವಿರಮಠದ ಮೈದಾನದಿಂದ ಪ್ರಾರಂಭವಾಗುವ ಮೆರವಣಿಗೆ ನೂರಾರು ಜಗ್ಗಲಗಿ, ಮತ್ತು ವಿವಿಧ ಚರ್ಮವಾದ್ಯಗಳ ಇಂಪಾದ ನಾದದೊಂದಿಗೆ, ಜಾನಪದ ಕಲಾವಿದರ ಸಾರಥ್ಯದಲ್ಲಿ ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬ್ರಾಡ್ ವೇ, ದುರ್ಗದ್ ವೃತ್ತ, ರಾಧಾಕೃಷ್ಣ ಗಲ್ಲಿ, ಬಾರದಾನಸಾಲ, ಸರಾಫ್ ಗಟ್ಟಿ, ಜವಳಿ ಸಾಲ, ಬೆಳಗಾಂವ್ ಗಲ್ಲಿ, ಪೆಂಡಾರ್ ಗಲ್ಲಿ, ತುಳಜಾಭವಾನಿ ವೃತ್ತ, ದಾಜಿಬಾನಪೇಟ್ ಮಾರ್ಗವಾಗಿ ಮತ್ತೆ ಮೂರುಸಾವಿರಮಠದ ಆವರಣದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಜಗ್ಗಲಗಿ ಹಬ್ಬದ ದಿವ್ಯ ಸಾನಿಧ್ಯವನ್ನು ಮೂರುಸಾವಿರಮಠದ ಡಾ.ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು, ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತೆಂಗಿನಕಾಯಿ ತಿಳಿಸಿದರು.
ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ,ಹೋಳಿ ಹಬ್ಬ ಹಾಗೂ ಜಗ್ಗಲಗಿ ಹಬ್ಬ ನಮ್ಮ ಭಾರತೀಯ ಪರಂಪರೆಯ ಹಬ್ಬಗಳು ಇಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೆ ಆಚರಣೆ ಮಾಡಬೇಕು. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಈ ಬಾರಿಗೆ ನಾವೆಲ್ಲರೂ ಕೋವಿಡ್ ನಿಂದ ಹೊರ ಬಂದಿದ್ದೇವೆ ಈ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷ ಭೇದ, ವರ್ಗ ಭೇದ ಮರೆತು ಆಚರಣೆ ಮಾಡಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ವಿಪ ಸದಸ್ಯ ಪ್ರದೀಪ್ ಶೆಟ್ಟರ್, ಪಾಲಿಕೆ ಸದಸ್ಯ ಶಿವು ಮೆನಸಿನಕಾಯಿ, ಸುಬ್ರಮಣ್ಯ ಶಿರಕೋಳ, ಸುಭಾಷ್ ಜಮಾದಾರ, ತೋಟಪ್ಪ, ಮೋಹನ್ ಲಾಲ್ ಜೈನ್ ಸೇರಿದಂತೆ ಮುಂತಾದವರು ಇದ್ದರು.