ಹುಬ್ಬಳ್ಳಿ : ಕೊಳಚೆ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಬದಲಾವಣೆ ಮಾಡಲಾಗುತ್ತಿದೆ. ಕಂದಾಯ ಇಲಾಖೆಯ ಜಾಗದಲ್ಲಿ ನಿರ್ಮಿಸಕೊಂಡು ಮನೆಗಳ ಏರಿಯಾವನ್ನು ಕೊಳಚ ಪ್ರದೇಶ ಎಂದು ಘೋಷಿಸಿ, ಮೊದಲಿಗೆ ಪರಿಚಯ ಪತ್ರ ನೀಡಲಾಗಿತ್ತು. ಈಗ ಮನೆಗಳಿಗೆ ಹಕ್ಕು ಪತ್ರ ನೀಡುವ ಕೆಲಸವಾಗುತ್ತಿವೆ. ನಿವಾಸಿಗಳು ಮಾಲೀಕತ್ವದ ಹಕ್ಕನ್ನು ಪಡೆಯುವ ಮೂಲಕ ಸರ್ಕಾರದ ಬೇರೆ ಬೇರೆ ಯೋಜನೆಗಳ ಲಾಭ ಪಡೆಯಬಹುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ವಾರ್ಡ್ ನಂ. 33(46) ಗಾಂಧಿ ನಗರ, ಬೆಂಗೇರಿಯ ಉದಯನಗರದಲ್ಲಿಂದು ಕೊಳಚೆ ಮಂಡಳಿ ಹಾಗೂ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವಾಸಿಗಳಿಗೆ ಮನೆಯ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.
ಹಕ್ಕುಪತ್ರಗಳನ್ನು ಪಡೆದವರು, ಸಬ್ ರಿಜಿಸ್ಟ್ರಾರ್ ನಲ್ಲಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ತಮ್ಮ ಮಾಲೀಕತ್ವ ಪಡೆಯಬಹುದು. ಕೊಳಚೆ ಮಂಡಳಿ ಅಧಿಕಾರಿಗಳ ನಿರ್ದೇಶನದಂತೆ ನೋಂದಣಿಯನ್ನು ಮಾಡಿಕೊಳ್ಳುವಂತೆ ನಿವಾಸಿಗಳಿಗೆ ಅವರು ಸಲಹೆ ನೀಡಿದರು.
ಪ್ರಜಾರಾಜ್ಯೋತ್ಸವ ಆಚರಿಸಲು ಅಂಬೇಡ್ಕರ್ ಕಾರಣಿಭೂತರಾಗಿದ್ದಾರೆ. ಸಂವಿಧಾನದಿಂದ ಎಲ್ಲ ವರ್ಗದವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಿದ್ದಾರೆ. ಸಂವಿಧಾನದಲ್ಲಿ ಸಮಾನತೆ ಬಗ್ಗೆ ತಿಳಿಸಲಾಗಿದೆ. ಅಸ್ಪೃಶ್ಯತೆ ನಿವಾರಣೆಗೆ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.
ಬೆಂಗೇರಿ ಮುಖ್ಯ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾರ್ಪಡಿಸಲಾಗುತ್ತಿದೆ. ಹುಬ್ಬಳ್ಳಿ ನಗರದಲ್ಲಿ ದಿನದ 24 ಗಂಟೆಗಳ ಕಾಲ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಆಶಾಸ್ವನೆ ನೀಡಿದರು.
ಮಾಜಿ ಮಹಾಪೌರ ವೀರಣ್ಣ ಸವಡಿ ಮಾತನಾಡಿ, ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ನಿವಾಸಿಗಳ ಬಹಳ ದಿನಗಳ ಆಸೆ ಇಂದು ಈಡೇರುತ್ತಿದೆ. ಇಲ್ಲಿನ 98 ಮನೆಗಳ ಮನೆಯ ಹಕ್ಕು ಪತ್ರ ವಿತರಣೆ ಮಾಡಲು ಮುಂದಾಗಿದ್ದೇವೆ. ಸಬ್ ರಿಜಿಸ್ಟ್ರಾರ್ ನಲ್ಲಿ ಮನೆಗಳು ನೋಂದಣಿ ಆಗಲಿವೆ. ಯಾವುದೇ ಆತಂಕವಿಲ್ಲದೇ ಜೀವನ ಸಾಗಿಸಬಹುದು ಎಂದು ತಿಳಿಸಿದರು.
ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಕೊಳಚೆ ಮಂಡಳಿ ಸಹಾಯಕ ಅಭಿಯಂತರ ಎಸ್.ವಿ. ಹಿರೇಮಠ, ಪಾಲಿಕೆ ಮುಖ್ಯ ಅಭಿಯಂತರ ವಿನಯ ತುಬಾಕಿ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಮುಖಂಡರಾದ ಬಸವರಾಜ ನಾಗಮ್ಮನವರ, ಜೈಭೀಮ್ ಸಮಿತಿಯ ರಾಜಾಧ್ಯಕ್ಷ ಬಸಂತಕುಮಾರ ಅನಂತಪುರ, ಯಲ್ಲಪ್ಪ ವಾಲೀಕಾರ ಅಂಥೋನಿ ಬಳ್ಳಾರಿ, ಬಸವರಾಜ ವಾಲ್ಮೀಕಿ, ಆನಂದ ಶಿಂಧೋಗಿ ಸೇರಿದಂತೆ ಇತರರು ಇದ್ದರು.