ಹುಬ್ಬಳ್ಳಿ – ಹನಿ ಹನಿ ಕೂಡಿದರೆ ಹಳ್ಳ ಅಂತಾರೆ. ಅದರಂತೆ ಹುಬ್ಬಳ್ಳಿಯ ವಿದ್ಯಾರ್ಥಿಗಳು ಒಂದು ಮುಷ್ಟಿ ಅಕ್ಕಿ ಎಂಬ ಘೋಷ ವಾಕ್ಯದೊಂದಿಗೆ ಅಭಿಯಾನವೊಂದನ್ನು ನಡೆಸಿ ಬರೋಬ್ಬರಿ 101 ಚೀಲ ಅಕ್ಕಿ ಸಂಗ್ರಹಿಸಿದ್ದಾರೆ. ಅದನ್ನು ದಾಸೋಹ ಕಾರ್ಯಗಳಿಗೆಂದು ಸಮರ್ಪಿಸಿ ಧನ್ಯತಾಭಾವ ಮೆರೆದಿದ್ದಾರೆ.
ಒಂದು ಮುಷ್ಟಿ ಅಕ್ಕಿ ಕೊಡಿ ಅಭಿಯಾನ ಕೈಗೊಳ್ಳೋ ಮೂಲಕ ಹುಬ್ಬಳ್ಳಿಯಲ್ಲಿ ಎನ್.ಎಸ್.ಎಸ್. ಕಾರ್ಯಕರ್ತರು ಗಮನ ಸೆಳೆದಿದ್ದಾರೆ. ಹುಬ್ಬಳ್ಳಿಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ಕಾರ್ಯಕರ್ತರು ಒಂದು ಮುಷ್ಟಿ ಅಭಿಯಾನ ಆರಂಭಿಸಿ, ಬರೋಬ್ಬರಿ 101 ಚೀಲ ಅಕ್ಕಿ ಸಂಗ್ರಹಿಸಿದ್ದಾರೆ. ತಾವು ಸಂಗ್ರಹಿಸಿದ 101 ಚೀಲ ಅಕ್ಕಿಯನ್ನು ಸಿದ್ಧಾರೂಢ ಮಠಕ್ಕೆ ವಿದ್ಯಾರ್ಥಿಗಳು ಸಮರ್ಪಣೆ ಮಾಡಿದ್ದಾರೆ. ಎನ್.ಎಸ್.ಎಸ್. ಕಾರ್ಯಕರ್ತರ ಕಾರ್ಯಕ್ಕೆ ಹಳೆಯ ವಿದ್ಯಾರ್ಥಿಗಳೂ ಸಾಥ್ ನೀಡಿದ್ದಾರೆ.
ಹುಬ್ಬಳ್ಳಿಯ ವಿವಿಧೆಡೆ ಅಕ್ಕಿ ಸಂಗ್ರಹಿಸಿದ ಕಾರ್ಯಕರ್ತರು, 2525 ಕೆ.ಜಿ. ಅಕ್ಕಿಯನ್ನು ದಾಸೋಹ ಕಾರ್ಯಕ್ಕೆ ಬಳಕೆಯಾಗಲೆಂದು ಸಿದ್ಧಾರೂಢ ಮಠಕ್ಕೆ ಸಮರ್ಪಣೆ ಮಾಡಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮೂಲಕ ಸಮರ್ಪಣೆ ಮಾಡಲಾಗಿದೆ. ಎನ್.ಎಸ್.ಎಸ್. ವಿದ್ಯಾರ್ಥಿಗಳ ಕಾರ್ಯಕ್ಕೆ ಹೊರಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಸಿದು ಬಂದವನಿಗೆ ಅನ್ನ ನೀಡುವ ಪರಂಪರೆ ನಮ್ಮದು. ಅಕ್ಕಿ ಸಂಗ್ರಹಿಸಿ ಮಠಗಳಿಗೆ, ಆಶ್ರಮಗಳಿಗೆ ನೀಡುತ್ತಿರುವುದು ಸಂತಸದ ವಿಷಯ. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸ್ವ ಆಸಕ್ತಿಯಿಂದ ಅಕ್ಕಿ ಸಂಗ್ರಹಿಸಿದ್ದಾರೆ. ಇದಕ್ಕೆ ಹಲವು ಹಳೆ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ವಿದ್ಯಾರ್ಥಿಗಳು ಸಂಗ್ರಹಿಸಿದ ಅಕ್ಕಿ ಚೀಲಗಳನ್ನು ಮಠಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳಿಗೆ ನೀಡುತ್ತಿರೋದು ಒಳ್ಳೆಯ ಬೆಳವಣಿಗೆ ಎಂದು ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ತ್ರಿವಿಧ ಸಿದ್ಧಾಂತಗಳಲ್ಲಿ ದಾಸೋಹ ಸಿದ್ಧಾಂತ ಶ್ರೇಷ್ಠವಾದುದು ಎಂದು ಹೇಳಿದರು. ಮಹಾವಿದ್ಯಾಲಯದ ಎನ್ಎಸ್ಎಸ್ ಕಾರ್ಯಕರ್ತರು “ಒಂದು ಮುಷ್ಟಿ ಅಕ್ಕಿ” ಅಭಿಯಾನದಡಿ ಸಂಗ್ರಹಿಸಿದ 101 ಅಕ್ಕಿ ಚೀಲಗಳನ್ನು ಸಿದ್ಧಾರೂಢ ಮಠಕ್ಕೆ ಸಮರ್ಪಣೆ ಮಾಡುವ ಮೂಲಕ ಧನ್ಯತೆ ಮೆರೆದಿದ್ದಾರೆ. 12ನೇ ಶತಮಾನದಲ್ಲಿ ಅನುಭಾವ ಸಿದ್ದಾಂತ, ದಾಸೋಹ ಸಿದ್ದಾಂತ ಹಾಗೂ ತತ್ವ ಸಿದ್ಧಾಂತಗಳನ್ನು ನೀಡಿದ್ದಾರೆ. ಅವುಗಳಲ್ಲಿ ದಾಸೋಹ ಮಹತ್ವದ್ದಾಗಿದೆ. ಹಸಿದು ಬಂದವನಿಗೆ ಅನ್ನ ನೀಡೋ ದಾಸೋಹ ಪರಂಪರೆ ನಮ್ಮದು. ವಿದ್ಯಾರ್ಥಿಗಳು ಈ ರೀತಿಯಾಗಿ ಅಕ್ಕಿ ಸಂಗ್ರಹಿಸಿ ದಾಸೋಹಕ್ಕೆಂದು ಬಳಸಲು ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಸಾಬೂನು ಹಾಗೂ ಮಾರ್ಜಕಗಳ ನಿಗಮ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಸಿದ್ಧಾರೂಢಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ.ಮಾಳಗಿ, ಎಂ.ಬಿ.ದಳಪತಿ, ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ. ಎಸ್.ವಿ. ಡಾ. ಡಿ.ವಿ. ಹೊನಗಣ್ಣವರ ಉಪಸ್ಥಿತರಿದ್ದರು. ಒಟ್ಟಾರೆ ರಾಷ್ಟ್ರೀಯ ಸ್ವಯಂ ಸೇವೆಯ ಕಾರ್ಯಕರ್ತರು ಮನೆ.. ಮನೆ.., ಅಂಗಡಿ… ಅಂಗಡಿ… ಸುತ್ತಿ ಒಂದೊಂದು ಮುಷ್ಟಿ ಅಕ್ಕಿ ಸಂಗ್ರಹಿಸಿ ಅನ್ನ ದಾಸೋಹಕ್ಕೆ ಸಮರ್ಪಿಸೋದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.