ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಮರುಪ್ರತಿಷ್ಠಾಪನೆ ಮಾಡದಿದ್ದಲ್ಲಿ ಫೆ.19 ರಂದು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಬೀಗ ಹಾಕಲಾಗುವುದು ಎಂದು ಹಿಂದೂ ಪರಿಷದ್ ರಾಜ್ಯ ಪ್ರಮುಖರಾದ ಗಣೇಶ ಕದಂ ಎಚ್ಚರಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹು-ಧಾ ಪಾಲಿಕೆಯಲ್ಲಿ ಶಿವಾಜಿ ಮಹಾರಾಜರ ಮೂರ್ತಿಯು ಕಳಪೆ ಗುಣಮಟ್ಟದಿಂದ ಕೂಡಿದ ಹಿನ್ನಲೆಯಲ್ಲಿ ಕೆಲವೇ ದಿನಗಳಲ್ಲಿ ಅದು ಶಿಥಿಲಗೊಂಡಿತ್ತು. ಆದರೆ ಮರು ಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಅನೇಕ ಭಾರಿ ಮನವಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಹಾಗೆಯೇ ಮೂರ್ತಿ ಪ್ರತಿಷ್ಠಾಪನೆಗೆ ಗಡವು ನೀಡಿದರು ಸಹ ನಿರ್ಲಕ್ಷ್ಯವಹಿಸಿದ್ದು ಖಂಡನೀಯ ಎಂದರು.
ಆದರಿಂದ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪಿಸದಿದ್ದಲ್ಲಿ ಫೆ.19 ರಂದು ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ ಅವರು ಅಧಿಕಾರಿಗಳಿಗೆ ಇದು ಕೊನೆಯ ಎಚ್ಚರಿಕೆ ಆಗಿದ್ದು, ಇದ್ದಕ್ಕೂ ಸ್ಪಂದಿಸದಿದ್ದರೆ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೊಣೆಯಾಗಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಧಾರವಾಡ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ ಕಟಾರೆ ಹುಬ್ಬಳ್ಳಿ ನಗರ ಅಧ್ಯಕ್ಷ ಸಿದ್ದು ರಾಯನಾಳ್, ಮಹಿಳಾ ಘಟಕದ ಅಧ್ಯಕ್ಷರಾದ ಲತಾ ಸಾವಂತ, ಮಹಿಳಾ ಪ್ರಧಾನ ಕಾರ್ಯದರ್ಶಿ ನೀತು ಪವಾರ್ ಉಪಸ್ಥಿತರಿದ್ದರು.