ಹುಬ್ಬಳ್ಳಿ: ಕನ್ನಡಿಗರು ಹಾಗೂ ಕನ್ನಡ ಭಾಷೆ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು
ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹೇಳಿದರು.
ಹುಬ್ಬಳ್ಳಿಯ ಸಿದ್ಧಾರೂಢರ ಮಠ ಹಾಗೂ ಗೋಶಾಲೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು,
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕನ್ನಡಿಗರು ಹಾಗೂ ಕನ್ನಡ ಭಾಷೆ ರಕ್ಷಣೆಗೆ ಬದ್ಧವಾಗಿದೆ. ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಈ ಕುರಿತು ಈ ಹಿಂದೆಯೂ ಚರ್ಚೆಯಾಗಿತ್ತು ಈಗಲೂ ಸದನದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಗೋಮಾಳ ಜಾಗದಲ್ಲಿ ಗೋಶಾಲೆಗಳನ್ನ ತೆರೆಯಲು ಸೂಚಿಸಲಾಗಿದೆ.
ಈ ನಿಟ್ಟಿನಲ್ಲಿ ಗೋಮಾಳ ಜಾಗಗಳನ್ನೂ ಸಹ ನಿಗದಿಪಡಿಸಲಾಗಿದೆ.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಸಾವಿರಾರು ಗೋವುಗಳನ್ನ ರಕ್ಷಣೆ ಮಾಡಲಾಗಿದೆ.
ಕಸಾಯಿಖಾನೆಯಲ್ಲಿ ಗೋವುಗಳ ಹತ್ಯೆ ವಿಚಾರದಲ್ಲಿ ಅನೇಕ ಪಿಐಎಲ್ ಮೊರೆ ಹೋಗಿದ್ದಾರೆ. ಆದರೆ ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನ ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದರು.