ಕುಂದಗೋಳ: ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ, ಮೋದಿ, ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇನೆ ಎಂದ ವಿರೋಧಗಳು ಕಾಂಗ್ರೆಸ್ ಬಿಟ್ಟು ದೂರ ಸರಿಯುತ್ತಿವೆ. ಇದೀಗ ಕಾಂಗ್ರೆಸ್ ಅಲ್ಪಸ್ವಲ್ಪ ಜೀವ ಹಿಡಿದುಕೊಂಡಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದಿದ್ದಾರೆ.
ಧಾರವಾಡ ಗದಗ ಹಾಗೂ ಹಾವೇರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಕುಂದಗೋಳ ಪಟ್ಟಣದ ಬಸವಣ್ಣನವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲೆ (ಕುಂದಗೋಳ ಮಂಡಳ) ವತಿಯಿಂದ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿದಿಗಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಹಿಂದೆಯೇ ಯುಪಿಎ ಎಂದರೇನು? ಈಗ ಯುಪಿಎ ಇಲ್ಲ” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡುಗು ಎಂದು ಗೊತ್ತಾದ ಕಾರಣ ಇತರ ಪಕ್ಷಗಳು ತಮ್ಮ ಅಸ್ತಿತ್ವಕ್ಕೆ ದೂರ ಸರಿಯುತ್ತಿವೆ. ಕಾಂಗ್ರೆಸ್ ಗೆ ಸರಿಯಾಗಿ ತಮ್ಮ ಪಕ್ಷದ ರಾಷ್ಟ್ರದ ಅಧ್ಯಕ್ಷರನ್ನು ನೇಮಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಕೆಟ್ಟು ನಿಂತ ಬಸ್ಸಿನಂತೆ ಕಾಂಗ್ರೆಸ್ ಪರಿಸ್ಥಿತಿಯಾಗಿದೆ ಎಂದು ವ್ಯಂಗ್ಯವಾಡಿದರು.
ಸದ್ಯ ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ಬಿಜೆಪಿಯಿಂದ 20 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದ್ದು, ಕನಿಷ್ಠ 16 ಅಭ್ಯರ್ಥಿಗಳು ಗೆಲುವು ಭರವಸೆ ಇದೆ. ಧಾರವಾಡ ಜಿಲ್ಲೆಯಲ್ಲಿ ಟೀಮ್ ಬಿಜೆಪಿ ಉತ್ತಮ ಕೆಲಸ ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷ ಕಲ್ಲು ಹಾಕುವುದರಲ್ಲಿ, ಬಿಲ್ಲು ಎತ್ತುವುದರಲ್ಲಿ ಎಕ್ಸಪರ್ಟ್ ಹಾಗಾಗಿ ಅಖಂಡ ಧಾರವಾಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಗೆ ಹೆಚ್ಚಿನ ಮತ ನೀಡಿ ಅಭೂತಪೂರ್ವ ಗೆಲುವು ನೀಡಬೇಕೆಂದು ಗ್ರಾಮ ಪಂಚಾಯತಿ ಸದಸ್ಯರಲ್ಲಿ ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಹಾಲಿ ಶಾಸಕ ಜಗದೀಶ್ ಶೆಟ್ಟರ್ ಮಾತನಾಡಿ, ದೇಶದ ಅತಿ ದೊಡ್ಡ ಪಕ್ಷ ಬಿಜೆಪಿ, ಕಳೆದ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 4500 ಸದಸ್ಯರುಗಳಿದ್ದಾರೆ. ಹಾಗಾಗಿ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿಗೆ ವಿಧಾನ ಪರಿಷತ್‌ನಲ್ಲಿ ಬಹುಮತದ ಕೊರತೆ ಇದ್ದು, ಈ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯತಿ ಸದಸ್ಯರು ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಅವರಿಗೆ ನೀಡಿ ಮತ್ತಷ್ಟು ಗ್ರಾಮೀಣ ಅಭಿವೃದ್ಧಿಗೆ ಶಕ್ತಿ ತುಂಬಬೇಕೆಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಮಾತನಾಡಿ, ಗ್ರಾಪಂ ಸದಸ್ಯರಾದಿಯಾಗಿ ಜನಪ್ರತಿನಿಧಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ, ಗೌರವ ಧನವನ್ನು ಹೆಚ್ಚಿಸುವುದು ನನ್ನ ಆದ್ಯತೆಯಾಗಿದೆ. ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ಸದ್ಯ 250 ರೂಗಳಿದ್ದು, ಅದನ್ನು 1000 ರೂ ಮಾಡಲು ಬರುವ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಲಿದ್ದೇನೆ. ಬರುವ ದಿನಗಳಲ್ಲಿ ಸರ್ಕಾರದ ಮುಂದೆ ಹೆಚ್ಚಿನ ಅನುದಾನದ ಬೇಡಿಕೆ ಇಟ್ಟು ಹೆಚ್ಚಿನ ಕೆಲಸ ಮಾಡಲು ಪ್ರಯತ್ನ ಮಾಡವೆ. ಹಾಗಾಗಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಈ ಬಾರಿ ತಮಗೆ ಮತ ನೀಡಿ ಗೆಲ್ಲಿಸಬೇಕೆಂದು ಮತಯಾಚನೆ ಮಾಡಿದರು.
ಪ್ರಚಾರ ಸಭೆಯಲ್ಲಿ ನವಲಗುಂದ ಶಾಸಕರು ಹಾಗೂ ಜವಳಿ ಕೈಮಗ್ಗ ಮತ್ತು ಸಕ್ಕರೆ ಖಾತೆ ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿದರು.
ಈ ಸಂದರ್ಭದಲ್ಲಿ ಲಿಂಗರಾಜ್ ಪಾಟೀಲ್, ಬಸವರಾಜ ಕುಂದಗೋಳಮಠ, ಎಮ್.ಆರ್.ಪಾಟೀಲ್, ಮಾಜಿ ಶಾಸಕರಾದ ಚಿಕನಗೌಡ್ರು, ಪ್ರಕಾಶ ಕೋಕಾಟೆ, ರಾಜು ಪಾಟೀಲ್, ಧಾನಪ್ಪ ಗಂಗಾಯಿ, ಹಾಲಾರವಿ,
ಹಾಗೂ ಬಿ ಜೆ ಪಿ ಮುಖಂಡರು,ಮಂಡಲ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.