ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಹಿರಿಯ, ಕಿರಿಯ ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳ ಒತ್ತಾಸೆ ಬೆಂಬಲದೊಂದಿಗೆ ಪುನರ್ ಆಯ್ಕೆ ಬಯಸಿ ಸ್ಪರ್ಧೆ ಮಾಡಿದ್ದು, ನನ್ನ ಆಯ್ಕೆ ನೂರಕ್ಕೆ ನೂರರಷ್ಟು ಖಚಿತವಾಗಿದೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಲಿಂಗರಾಜ ರುದ್ರಪ್ಪ ಅಂಗಡಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಕನ್ನಡ ಮನಸ್ಸುಗಳ ಸದ್ಭಾವನೆ, ಸನ್ಮಾರ್ಗದರ್ಶನ, ಬೆಂಬಲ ಸಹಕಾರದಿಂದ ದಕ್ಷತೆಯಿಂದ ಪ್ರಮಾಣಿಕವಾಗಿ 2019 ರಲ್ಲಿ ಧಾರವಾಡದಲ್ಲಿ ಯಶಸ್ವಿ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಿದ್ದೇನೆ. ಜನ ಪ್ರತಿನಿಧಿಗಳ ಅನುದಾನದಿಂದ ಕನ್ನಡ ಸಾಂಸ್ಕೃತಿಕ ವೇದಿಕೆ ನಿರ್ಮಾಣ ಮಾಡಿದ್ದೇನೆ. ಈ ಹಿಂದೆ 20 ದತ್ತಿಗಳಿಂದ 80 ದತ್ತಿಗಳನ್ನು ಹೆಚ್ಚಳ ಮಾಡಿ ಕಾಲಕಾಲಕ್ಕೆ ದತ್ತಿ ಕಾರ್ಯಕ್ರಮ ಮಾಡಿದ್ದೇನೆ. 25 ತಾಲೂಕು 7 ಯಶಸ್ವಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು.
ನಾಳೆ ನಡೆಯಲಿರುವ ಚುನಾವಣೆಯಲ್ಲಿ ಮರು ಆಯ್ಕೆ ಆದರೆ ಸಾಹಿತ್ಯ ಭವನದ ಆವರಣದಲ್ಲಿ ಹಸಿರು ವಾತಾವರಣ ನಿರ್ಮಾಣ, ಉದ್ಯಾನವನ ನಿರ್ಮಾಣ, ಜಿಲ್ಲೆಯ ಉದಯೋನ್ಮುಖ ಲೇಖಕರಿಗಾಗಿ ಕಾವ್ಯ ಮತ್ತು ಸಣ್ಣಕತೆ ಕೃತಿ ರಚನಾ ಕಮ್ಮಟಗಳನ್ನು ನಡೆಸುವುದು, ಜಿಲ್ಲೆಯ ಸಾಹಿತಿಗಳ ಕೃತಿ ಲೋಕಾರ್ಪಣೆಗೆ ಅವಕಾಶ ಮಾಡಿಕೊಡುವುದು ಸೇರಿದಂತೆ ಇನ್ನಿತರ ಯೋಜನೆ ಹಮ್ಮಿಕೊಂಡಿದ್ದೇನೆ. ಹಾಗಾಗಿ ನಾಳೆ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಚುನಾವಣೆಯಲ್ಲಿ ಎಲ್ಲ ಮತದಾರರು ನನಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಕೆ.ಆದಪ್ಪನವರ, ಪ್ರೋ.ವಿ.ವಿ.ಮಾಗನೂರು, ಹಿಂದಿ ಕವಿಗಳಾದ ಡಾ.ಧರನೇಂದ್ರ ಕುರಕರೆ, ಚಂದ್ರಬಸಪ್ಪ, ಉದಯಚಂದ್ರ, ಗುರುಸಿದ್ದಪ್ಪ, ಕೆ.ಎಸ್.ಕೌಜಲಗಿ ಸೇರಿದಂತೆ ಮುಂತಾದವರು ಇದ್ದರು.