Home / Top News / ಸ್ಮಾರ್ಟ್ ಸಿಟಿ ಯೋಜನೆಗೆ ಹಣಕಾಸಿನ ಕೊರತೆ ಇಲ್ಲ :  ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ : ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಸ್ಮಾರ್ಟ್ ಸಿಟಿ ಯೋಜನೆಗೆ ಹಣಕಾಸಿನ ಕೊರತೆ ಇಲ್ಲ :  ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ : ಸಚಿವ ಶಂಕರ ಪಾಟೀಲ ಮುನೇನಕೊಪ್ಪ

Spread the love

ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಯೋಜನೆಯು ಪ್ರಧಾನ ಮಂತ್ರಿಗಳ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ.ಅ್ಉ ಸುಂದರವಾಗಿ ಸಾಕಾರವಾಗಬೇಕು.ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಗೆ ಹಣಕಾಸಿನ ಕೊರತೆ ಇಲ್ಲ, ಕಾಮಗಾರಿಗಳು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.ಕೋವಿಡ್ ಲಾಕ್‌ಡೌನ್ ಕಾರಣದಿಂದ ವಿಳಂಬವಾಗಿದ್ದ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು.ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ‌ ಎಂದು ಕೈಮಗ್ಗ,ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಸ್ಮಾರ್ಟ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಬಸ್ ನಿಲ್ದಾಣ ನಿರ್ಮಾಣ,ಜನತಾ ಬಜಾರ್, ಕೊಪ್ಪೀಕರ್ ರಸ್ತೆ ಹಾಗೂ ಸ್ಟೇಷನ್ ರಸ್ತೆಯ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸರ್ಕ್ಯೂಟ್ ಹೌಸಿನಲ್ಲಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗ ಮಳೆ ನಿಂತಿದ್ದು, ಡಾಂಬರು ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಿವೆ, ಕಾಮಗಾರಿಗಳ ವೇಗ ಹೆಚ್ಚಳವಾಗಬೇಕು.ಬಸ್ ನಿಲ್ದಾಣ, ಜನತಾ ಬಜಾರ್,ನೆಹರೂ ಮೈದಾನ ಇಂತಹ ಮುಖ್ಯ ಸ್ಥಳಗಳು ಅವಳಿ‌ ನಗರದ ಪ್ರಮುಖ ಕೇಂದ್ರಗಳಾಗಿವೆ‌.ಕಾಲಮಿತಿಯೊಳಗೆ ಈ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ತೋಳನಕೆರೆಗೆ ಚರಂಡಿ,ನಾಲೆಗಳ ನೀರು ಬಂದು ಸೇರದಂತೆ ತುರ್ತು ಕಾರ್ಯ ಕೈಗೊಳ್ಳಬೇಕು.ಕಾಮಗಾರಿ ಪೂರ್ಣಗೊಂಡ ನಂತರ ಖುದ್ದಾಗಿ ಭೇಟಿ ನೀಡುವೆ. ಹೆಸ್ಕಾಂ,ನಗರ ನೀರು ಸರಬರಾಜು ಮಂಡಳಿ,ಮಹಾನಗರಪಾಲಿಕೆ,ಲೋಕೋಪಯೋಗಿ ಇಲಾಖೆ ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ರಾತ್ರಿ ವೇಳೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು ,ಯೋಜನೆಗೆ ಹಣಕಾಸಿನ ಕೊರತೆಯಿಲ್ಲ ಎಂದು ಸಚಿವರು ಸೂಚಿಸಿದರು.

ಪೊಲೀಸ್ ಹಾಗೂ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿವೆ. ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಈ ಕುರಿತು ಇನ್ನೊಂದು ಸಭೆ ನಡೆಸುವೆ.ಹುಬ್ಬಳ್ಳಿ ಧಾರವಾಡ ಅವಳಿನಗರದ ಎಲ್ಲಾ ವಾರ್ಡುಗಳಿಗೆ 24X7 ನಿರಂತರ ಕುಡಿಯುವ ನೀರು ಸರಬರಾಜು ಕಾರ್ಯವನ್ನು ನಗರ ನೀರು ಸರಬರಾಜು ಮಂಡಳಿಯಿಂದ ಎಲ್ ಅ್ಯಂಡ್ ಟಿ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ಸೂಚಿಸಿದರು.
ಗದಗ ,ವಿಜಯಪುರ ರಸ್ತೆಗಳಿಂದ ಬೆಂಗಳೂರಿಗೆ ತೆರಳುವ ಪಿ.ಬಿ.ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯನ್ನು ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಮಾತನಾಡಿ, ಸ್ಮಾರ್ಟ್ ಸಿಟಿ ಕಾಮಗಾರಿಗಳು ಅನಗತ್ಯವಾಗಿ ವಿಳಂಬ ಮಾಡಬಾರದು.ರಾಷ್ಟ್ರೀಯ ಹೆದ್ದಾರಿ 63 ರಿಂದ ಕೆಲವು ಭಾರೀ ವಾಹನಗಳು ನಲವಡಿ ಟೋಲ್ ಹತ್ತಿರದಿಂದ ಕೋಳಿವಾಡ ಗ್ರಾಮದೆಡೆಗೆ ಸಂಚರಿಸುತ್ತಿವೆ.ಈ ರಸ್ತೆಯು ಭಾರೀ ವಾಹನಗಳ ಸಂಚಾರಕ್ಕೆ ಸೂಕ್ತವಲ್ಲ ಎಂಬ ಸೂಚನಾ ಫಲಕಗಳನ್ನು ಹಾಕಿ ವಾಹನಗಳ ಸಂಚಾರ ತಡೆಯಬೇಕು ಎಂದು ಸೂಚಿಸಿದರು.

ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಲಾಭೂ ರಾಮ್ ಮಾತನಾಡಿ, ನಗರದ ಜನನಿಬಿಡ ಸ್ಥಳಗಳಲ್ಲಿ ಕಾಮಗಾರಿ ಕೈಗೊಳ್ಳುವಾಗ ಸಾರ್ವಜನಿಕ ಸಂಚಾರಕ್ಕೆ ವ್ಯತ್ಯಯವಾಗದಂತೆ ಒಂದು ಕಡೆಯ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾದ ಬಳಿಕ ಮತ್ತೊಂದು ಬದಿಯ ಕಾಮಗಾರಿ ಪ್ರಾರಂಭಿಸಬೇಕು.ಕಾರವಾರ ರಸ್ತೆ ಹಾಗೂ ಅಕ್ಷಯ್ ಪಾರ್ಕ್ ಜಂಕ್ಷನ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ.ಸುರೇಶ್ ಇಟ್ನಾಳ ಮಾತನಾಡಿ, ಅವಳಿ ನಗರದಲ್ಲಿ ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗಗಳು ನಿರ್ವಹಿಸುತ್ತಿರುವ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಳ್ಳಬೇಕು ಎಂದರು.

 

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎಸ್.ಚಂದ್ರಶೇಖರ ಮಾತನಾಡಿ, ಸ್ಮಾರ್ಟ್ ಸ್ಕೂಲ್,ಹೆಲ್ತ್ ಕೇರ್,ಮಹಾತ್ಮ ಗಾಂಧಿ ಉದ್ಯಾನವನದ ಸಂಗೀತ ಕಾರಂಜಿ,ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಘಟಕ,ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ,ಇಂದಿರಾ ಗಾಜಿನ ಮನೆ ನವೀಕರಣ,ಪಜಲ್ ಪಾರ್ಕಿಂಗ್ ಸೇರಿದಂತೆ ಮತ್ತಿತರ ಕಾಮಗಾರಿಗಳ ಪ್ರಗತಿ ವಿವರ ನೀಡಿದರು.40 ಕೋಟಿ ರೂ.ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ,47 ಕೋಟಿ ರೂ.ವೆಚ್ಚದಲ್ಲಿ ಕೊಪ್ಪೀಕರ್ ಹಾಗೂ ಇತರ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್.ಬಿ.ಕುಮ್ಮಣ್ಣವರ, ಸ್ಮಾರ್ಟ್ ಸಿಟಿ ಯೋಜನೆಯ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀನಿವಾಸ ಪಾಟೀಲ, ಚನ್ನಬಸವರಾಜು ಮತ್ತಿತರರು ಇದ್ದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]