ಹುಬ್ಬಳ್ಳಿ : ಭಾರತೀಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನೂತನ ಶಿಕ್ಷಣ ನೀತಿ ಕುರಿತು ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಲಯದ ಮೂರು ವರ್ಷಗಳ ಕಾಲ ಚರ್ಚಿಸಿ ಸಮಗ್ರವಾಗಿ ರೂಪಿಸಲಾಗಿದೆ. 21 ಶತಮಾನಕ್ಕೆ ತಕ್ಕಂತೆ, ದೇಶದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟದ ಪೈಪೋಟಿಗೆ ಸಿದ್ದಪಡಿಸುವುದು, ಕೌಶಲ್ಯವನ್ನು ಹೆಚ್ಚಿಸವುದು ಶಿಕ್ಷಣ ನೀತಿಯ ಉದ್ದೇಶವಾಗಿದೆ. ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೈಗೊಂಡಿದ್ದಾರೆ. ಭಾರತೀಯರಿಂದ ಭಾರತೀಯ ಮಕ್ಕಳಿಗಾಗಿ ರೂಪಿಸಿರುವ ಶಿಕ್ಷಣ ವ್ಯವಸ್ಥೆ ಇದಾಗಿದೆ ಎಂದರು.
ಮಾಧ್ಯಮ ಮಿತ್ರರ ಪ್ರಶ್ನೆ ಉತ್ತರಿಸಿದ ಅವರು, ಕೋವಿಡ್ ಲಾಕ್ ಡೌನ್ ತೆರವಿನ ನಂತರ, ಜನರು ಸಾಮಾನ್ಯ ಜನ ಜೀವನಕ್ಕೆ ಮರಳುತ್ತಿದ್ದಾರೆ. ವ್ಯಾಪಾರ ವಹಿವಾಟುಗಳು ಸಹಜವಾಗಿ ನಡೆಯುತ್ತಿವೆ ಈ ಸಂದರ್ಭದಲ್ಲಿ ಬಂದ್ ಕರೆ ನೀಡುವುದು ಸರಿಯಲ್ಲ. ಪಂಚಮಸಾಲಿ ಮೀಸಲಾತಿಗೆ ಕುರಿತು ಸದನದಲ್ಲಿ ಉತ್ತರಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಬೃಹತ್ ಮಧ್ಯಮ ಕೈಗಾರಿಕೆ ಸಚಿವ ಮುರಗೇಶ್ ನಿರಾಣಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಆಯುಕ್ತ ಲಾಭುರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.