ಹೆಚ್ಚುವರಿ ಹೆಸರು ಕಾಳು ಖರೀದಿ ಕೇಂದ್ರಕ್ಕೆ ಅನುಮೋದನೆ : ಸಚಿವ ಶಂಕರಪಾಟೀಲ್ ಮುನೋನಕೊಪ್ಪ
ಕುಂದಗೋಳ : ರೈತರ ಸಮಸ್ಯೆಗಳನ್ನು ಪರಿಹರಿಸಲು ಪಕ್ಷಭೇದ ಮರೆತು ಶ್ರಮಿಸಲಾಗುವುದು. ಕುಂದಗೋಳ ತಾಲೂಕಿನಲ್ಲಿ ಬೆಂಬಲ ಬೆಲೆಯಡಿ ಎರೆಡು ಕಡೆ ಹೆಸರು ಹಾಗೂ ಉದ್ದು ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಹೆಚ್ಚಿನ ಕೇಂದ್ರ ಸ್ಥಾಪಿಸಲು ಮನವಿ ಸಲ್ಲಿಸಿದರೆ, ಇನ್ನೂ ಎರೆಡು ಕಡೆ ಖರೀದಿ ಕೇಂದ್ರಗಳನ್ನು ತೆರೆಯಲು ಅನುಮೋದನೆ ನೀಡಲಾಗುವುದು ಎಂದು ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಕುಂದಗೋಳದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸ್ಥಾಪಿಸಲಾಗಿರುವ ಹೆಸರು ಹಾಗೂ ಉದ್ದು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಂಬಲ ಬೆಲೆಯಡಿ ಧಾನ್ಯಗಳ ಖರೀದಿ ಸಮಯವನ್ನು 45 ದಿನಗಳಿಂದ 90 ದಿನಗಳಿಗೆ ಏರಿಸಲಾಗಿದೆ. ಪ್ರತಿ ರೈತರಿಗೆ 4 ಕ್ವಿಂಟಲ್ ಇದ್ದ ಖರೀದಿ ಮಿತಿಯನ್ನು 6 ಕ್ವಿಂಟಾಲ್ ಹೆಚ್ಚಿಸಲಾಗಿದೆ. ಹೆಸರಿಗೆ 7,275/- ರೂಪಾಯಿ ಹಾಗೂ ಉದ್ದಿಗೆ 6,300/- ರೂಪಾಯಿ ಬೆಂಬಲ ಬೆಲೆಯನ್ನು ಘೋಷಿಸಲಾಗಿದೆ. ಸಚಿವನಾಗಿ ಆಯ್ಕೆಯಾದ ನಂತರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ರೈತರ ಪರವಾಗಿ ಬೆಂಬಲ ಆಧಾರಿತ ಖರೀದಿಕೇಂದ್ರಗಳನ್ನು ಸ್ಥಾಪಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದರ ಆಧಾರದ ಮೇಲೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತು. ಕೇಂದ್ರ ಸರ್ಕಾರವು ಮನವಿ ಪುರಸ್ಕರಿಗೆ ಹೆಸರು ಖರೀದಿಗೆ ಅನುಮೋದನೆ ನೀಡಿದೆ. ಸಕಾಲದಲ್ಲಿ ಬೆಂಬಲ ಬೆಲೆ ಘೋಷಿಸಿದ್ದರಿಂದ ಖಾಸಗಿ ಮಾರುಕಟ್ಟೆಯಲ್ಲಿ ಹೆಸರು ಕಾಳಿನ ಧಾರಣೆಬೆಲೆ ಹೆಚ್ಚಾಗಿದೆ. ಹತ್ತಿ ಹಾಗೂ ಗೋವಿನಜೋಳಕ್ಕೂ ಬೆಂಬಲ ಬೆಲೆಯನ್ನು ಘೋಷಿಸಲಾಗುವುದು.
ರೈತರ ಸಮಸ್ಯೆಗೆ ಸ್ಪಂದಿಸಿದ ಸಚಿವರು, ಶೀಘ್ರವಾಗಿ ತಾಲೂಕಿನ ಹಳ್ಳಿಗಳಿಗೆ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಲಾಗುವುದು. ಜಲಧಾರೆ ಮತ್ತು ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ 388 ಹಳ್ಳಿಗಳಿಗೂ ನೀರು ಪೂರೈಸಲಾಗುವುದು. ಗ್ರಾಮಗಳ ಪ್ರತಿ ಮನೆಗಳಿಗೂ ಕುಡಿಯುವ ನೀರು ತಲುಪಿಸಲಾಗುವುದು ಎಂದರು. 6 ಕ್ವಿಂಟಾಲ್ ಹೆಸರು ಖರೀದಿ ಮಿತಿಯನ್ನು 10 ಕ್ವಿಂಟಾಲ್ ಗೆ ಏರಿಸುವಂತೆ, ಕುಸುಬಿ ಹಾಗೂ ಬೆಳ್ಳೋಳ್ಳಿಗಳನ್ನು ಬೆಂಬಲ ಬೆಲೆಯಡಿ ಖರೀದಿಸುವಂತೆ ರೈತರು ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಕುಸುಮಾವತಿ ಕೋಂ. ಶಿವಳ್ಳಿ, ಮಾಜಿ ಶಾಸಕ ಎಸ್‌ಐ ಚಿಕ್ಕನಗೌಡರ, ಎಪಿಎಂಸಿ ಅಧ್ಯಕ್ಷ ಸಿವಾಯ್ ಪಾಟೀಲ, ಕಾರ್ಯದರ್ಶಿ ಎಮ್‌ಹೆಚ್ ಹಾತಲಗೇರಿ, ಕೃಷಿಕ ಸಮಾಜ ಅಧ್ಯಕ್ಷ ಅರವಿಂದ ಕಟಗಿ, ಮುಖಂಡ ರವಿಗೌಡ ಪಾಟೀಲ, ಬಸವರಾಜ ಕುಂದೂರ, ಎಎಮ್ ಕಟಗಿ ಸೇರಿದಂತೆ ರೈತ ಭಾಂದವರು ಉಪಸ್ಥಿತರಿದ್ದರು.