Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಜೋಗ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ ಗೆ ಹೆಚ್ಚಿದ ಬೇಡಿಕೆ; ಬುಧವಾರ ವಿಶೇಷ ಬಸ್ ವ್ಯವಸ್ಥೆ

ಜೋಗ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ ಗೆ ಹೆಚ್ಚಿದ ಬೇಡಿಕೆ; ಬುಧವಾರ ವಿಶೇಷ ಬಸ್ ವ್ಯವಸ್ಥೆ

Spread the love

ಹುಬ್ಬಳ್ಳಿ: ಮಳೆಗಾಲದ ಪ್ರಯುಕ್ತ ಸಾರಿಗೆ ಸಂಸ್ಥೆ ಜೋಗ ಫಾಲ್ಸ್ ಗೆ ಆರಂಭಿಸಿರುವ ಪ್ಯಾಕೇಜ್ ಟೂರ್ ಬಸ್ ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಯಾಣಿಕರ ಬೇಡಿಕೆಯಂತೆ ರಂಜಾನ್ ರಜೆ ಇರುವ ಹಿನ್ನೆಲೆಯಲ್ಲಿ ಬುಧವಾರ ದಂದು ಸಹ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ವಿಖ್ಯಾತ ಜೋಗ ಫಾಲ್ಸ್ ಮೈದುಂಬಿಕೊಂಡಿದೆ. ಮಳೆ,ಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಡುವ ಸುತ್ತಲಿನ ಪ್ರಕೃತಿ ಸೌಂದರ್ಯ ಅನನ್ಯ. ಕಣ್ಮನ ಸೆಳೆಯುವ ಜಲಪಾತದ ದೃಷ್ಯ ವೈಭವ ಸವಿಯಲು ಇದು ಅತ್ಯಂತ ಸೂಕ್ತ ಕಾಲ. ಇದರ ವೀಕ್ಷಣೆಗೆ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹೋಗುತ್ತಾರೆ. ಹುಬ್ಬಳ್ಳಿಯಿಂದಲೂ ಬಹಳಷ್ಟು ಜನರು ಹೋಗಲು ಬಯಸುತ್ತಾರೆ. ಆದರೆ ನೇರ ಬಸ್ ಸಂಪರ್ಕ ಇರಲಿಲ್ಲ.ಬಹುದಿನಳ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ವಾರಾಂತ್ಯ ದಿನಗಳಂದು ಶನಿವಾರ ಮತ್ತು ರವಿವಾರಗಳಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ರವಿವಾರ ಆರಂಭದ ದಿನ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಮಕ್ಕಳು, ಯವಕ- ಯುವತಿಯರು, ಒಂದೇ ಕುಟುಂಬದ ಸದಸ್ಯರು, ದಂಪತಿಗಳು ಹೀಗೆ ಪುರುಷರು, ಮಹಿಳೆಯರೆನ್ನದೆ ಎಲ್ಲಾ ವಯಸ್ಸಿನವರು ಆಸಕ್ತಿಯಿಂದ ಬಸ್ಸೇರಿದ್ದಾರೆ. ಮೊದಲ ದಿನ ತೆರಳಿದ ಬಸ್ ನಲ್ಲಿ 45 ಯಾತ್ರಿಗಳು ಜೋಗಕ್ಕೆ ಪ್ರಯಾಣ ಬೆಳೆಸಿದ್ದಾರೆ.

ವೈಯಕ್ತಿಕ ವಾಹನಕ್ಕೆ ಹೋಲಿಸಿದಾಗ ಪ್ರಯಾಣದರ ಬಹಳ ಕಡಿಮೆ. ಜೊತೆಗೆ ಎಡೆಬಿಡದೆ ಸುರಿಯುವ ಮಳೆಯಲ್ಲಿ ಘಟ್ಟ ಪ್ರದೇಶಗಳ ಅಂಕು ಡೊಂಕಿನ ರಸ್ತೆಗಳಲ್ಲಿ ಸ್ವಯಂ ವಾಹನ ಚಾಲನೆಗಿಂತ ಬಸ್ ನಲ್ಲಿ ತೆರಳುವುದು ಅತ್ಯಂತ ಸುರಕ್ಷಿತ.ಹೀಗಾಗಿ ಹಲವರು ಮುಂದಿನ ಬಸ್ ಯಾವಾಗ ಎಂದು ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಕೇಳುತ್ತಿದ್ದಾರೆ. ಅನೇಕರು ದೂರವಾಣಿಯ ಮೂಲಕ ವಿಚಾರಿಸುತ್ತಿದ್ದಾರೆ. ರಂಜಾನ್ ಪ್ರಯುಕ್ತ ಸಾರ್ವಜನಿಕ ರಜೆ ಇರುವ ಹಿನ್ನೆಲೆಯಲ್ಲಿ ಬುಧವಾರವೂ ವಿಶೇಷ ಬಸ್ ವ್ಯವಸ್ಥೆ ಮಾಡುವಂತೆ ಕೋರಿ ಮನವಿಗಳು ಬರುತ್ತಿದೆ.

ಬಹು ಜನರ ಬೇಡಿಕೆ ಯಂತೆ ಬುಧವಾರ ವಿಶೇಷ ಪ್ಯಾಜೇಜ್ ಟೂರ್ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಸ್ ಬೆಳಿಗ್ಗೆ 7-30 ಕ್ಕೆ ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತದೆ. ಹೋಗುವಾಗ ಶಿರಸಿಯಲ್ಲಿ ಮಾರಿಕಾಂಬಾ ದೇವಾಲಯ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 12-30 ಕ್ಕೆ ಜೋಗ ತಲುಪುತ್ತದೆ. ಅಲ್ಲಿ ಸ್ಥಳ ವೀಕ್ಷಣೆ, ಊಟೋಪಚಾರಕ್ಕೆ ನಾಲ್ಕು ತಾಸು ಸಮಯಾವಕಾಶ ವಿರುತ್ತದೆ. ಸಂಜೆ 4-30 ಕ್ಕೆ ಜೋಗದಿಂದ ಬಿಟ್ಟು ರಾತ್ರಿ 9-00ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ.ಹೋಗಿ ಬರಲು ಪ್ರಯಾಣ ದರ ರೂ 350.

ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತದೆ. ಬಸ್ಸಿನ ಆಸನ ಸಂಖ್ಯೆಯಷ್ಟು ಜನರಿಗೆ ಮಾತ್ರ ಅವಕಾಶವಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಆಗಾಗ ಮಳೆ ಬರುವ ಸಾಧ್ಯತೆ ಇರುವ ಕಾರಣ ಛತ್ರಿ ತೆಗೆದುಕೊಂಡು ಬರುವುದು ಉತ್ತಮ. ಸುರಕ್ಷತೆಯ ದೃಷ್ಟಿಯಿಂದ ಮನೆಯಿಂದಲೇ ಆಹಾರ ಮತ್ತು ಕುಡಿಯಲು ನೀರು ತೆಗೆದುಕೊಂಡು ಬರುವುದು ಸೂಕ್ತ.

ಈ ಬಸ್ ಗೆ ಆನ್ ಲೈನ್ ನಲ್ಲಿ ಮತ್ತು ಹೊಸೂರು ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಬಸ್ ನಿಲ್ದಾಣ ಅಧಿಕಾರಿ 7760991662 / 7760991682 ಅಥವ ಘಟಕ ವ್ಯವಸ್ಥಾಪಕರನ್ನು 7760991677 ರಲ್ಲಿ ಸಂಪರ್ಕಿಸಬಹುದು ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]