ಹುಬ್ಬಳ್ಳಿ : ಹುಬ್ಬಳ್ಳಿ ನವನಗರದಲ್ಲಿನ ಎಂ.ಎಸ್.ಐ.ಎಲ್. (ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್) ಒಡತನದಲ್ಲಿನ ಸ್ಥಳಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಎಂ.ಎಸ್.ಐ.ಎಲ್.ನ ಅಧ್ಯಕ್ಷ ಶಾಸಕ ಹರತಾಳು ಹಾಲಪ್ಪನವರು ಭೇಟಿ ನೀಡಿ ಪರಿಶೀಲಿಸಿದರು. ಹುಬ್ಬಳ್ಳಿ ಧಾರವಾಡ ರಸ್ತೆಗೆ ಹೊಂದಿಕೊಂಡಂತೆ 2 ಎಕರೆಗೂ ಅಧಿಕ ವಿಸ್ತೀರ್ಣದ ನಿವೇಶನ ಎಂ.ಎಸ್.ಐ.ಎಲ್. ಒಡೆತನದಲ್ಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಹಲವು ವರ್ಷಗಳಿಂದ ಸಂಸ್ಥೆ ಸಂಬಂಧಿಸಿದ ಖಾಲಿ ಜಾಗ ಇರುವುದು ಗಮನಕ್ಕೆ ಬಂದಿತು. ಈ ಕುರಿತು ಅಧ್ಯಕ್ಷ ಹರತಾಳು ಹಾಲಪ್ಪನವರೊಂದಿಗೆ ಚರ್ಚಿಸಿ ಗಮನಕ್ಕೆ ತಂದು ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಸಂಸ್ಥೆಯಿಂದ ಹಲವು ಕಡೆ ಲಕ್ಷಾಂತರ ರೂಪಾಯಿಗಳನ್ನು ಬಾಡಿಗೆಗಾಗಿ ವ್ಯಯಿಸಲಾಗುತ್ತಿದೆ. ಕಟ್ಟಡ ನಿರ್ಮಾಣದಿಂದ ಹಣ ಉಳಿತಾಯವಾಗುತ್ತದೆ. ಹುಬ್ಬಳ್ಳಿ ಉತ್ತರ ಕರ್ನಾಟಕದ ಪ್ರಮುಖ ಸ್ಥಳ ಇಲ್ಲಿಂದ ಎಂ.ಎಸ್.ಐ.ಎಲ್ ಚಟುವಟಿಕೆಗಳನ್ನು ಹೆಚ್ಚು ಮಾಡುವುದರಿಂದ ಪರಿಣಾಮಕಾರಿ ಕೆಲಸ ನಿರ್ವಹಿಸಬಹುದು. ಇಂದು ಜಂಟಿಯಾಗಿ ಸ್ಥಳ ವೀಕ್ಷಣೆ ಮಾಡಿದ್ದೇವೆ. ಮುಂದೆ ಸೂಕ್ತ ಎನಿಸುವ ರೀತಿಯಲ್ಲಿ ಕಟ್ಟದ ಯೋಜನೆ ರೂಪಿಸಲಾಗುವುದು ಎಂದರು.
ಅಧ್ಯಕ್ಷರಾದ ಹರತಾಳು ಹಾಲಪ್ಪ ಮಾತನಾಡಿ, ರಾಜ್ಯದ ಹಲವೆಡೆ ಸಂಸ್ಥೆಯ ಆಸ್ತಿಗಳನ್ನು ಹಿರಿಯರು ಮಾಡಿದ್ದಾರೆ. ಹುಬ್ಬಳ್ಳಿ ಮುಖ್ಯವಾದ ಸ್ಥಳದಲ್ಲಿ ಜಾಗವಿದೆ. ಇಲ್ಲಿ ವಾಣಿಜ್ಯ ದೃಷ್ಟಿಯಿಂದ ಕಟ್ಟಡ ನಿರ್ಮಿಸಬಹುದಾಗಿದೆ. 30 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಲಾಗುವುದು. ಹುಬ್ಬಳ್ಳಿಯ ಸಂಸ್ಥೆಯ ಉಗ್ರಾಣಗಳಿಗೆ 40 ಲಕ್ಷ ರೂಪಾಯಿ ಬಾಡಿಗೆ ವ್ಯಯಿಸಲಾಗುತ್ತಿದೆ. ಸಂಸ್ಥೆಯ ಕಚೇರಿಗಳು ಸಹ ಬಾಡಿಗೆ ಕಟ್ಟಡದಲ್ಲಿವೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಾಣಿಜ್ಯ, ಉಗ್ರಾಣ, ಕಚೇರಿ ಹಾಗೂ ವಸತಿ ಗೃಹಗಳನ್ನು ಸಹ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ಈ ಕುರಿತು ಬೆಂಗಳೂರಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಂ.ಎಸ್.ಐ.ಎಲ್. ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್ ವಿಕಾಸ್, ನಿರ್ದೇಶಕರುಗಳಾದ ಶಿವಾಜಿ ಶಿವರಾಯ ಡೊಳ್ಳಿನ, ತೋಟಪ್ಪ ನಿಡಗುಂದಿ, ಮುಖ್ಯ ಪ್ರಧಾನ ವ್ಯವಸ್ಥಾಪಕ ರಮಾಕಂತ ಹೆಬ್ಬಳ್ಳಿ, ಶಂಕರ್ ಚೌವ್ಹಾಣ್, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ ಉಪಸ್ಥಿತರಿದ್ದರು.