ಹುಬ್ಬಳ್ಳಿ
ಹುಬ್ಬಳ್ಳಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ನಾಯಕರನ್ನ ಸೋಲಿಸುವ ಗುರಿ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಷ್ಟ್ರಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಪ್ರಹ್ಲಾದ್ ಜೋಶಿ ವಿರುದ್ಧ ಬದ್ಧ ವೈರಿಯನ್ನು ಅಖಾಡಕ್ಕಿಳಿಸೋ ರಣತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ. ಲೋಕಸಭಾ ಚುನಾವಣೆಗೆ ಮಾಜಿ ಶಾಸಕರೊಬ್ಬರನ್ನು ಕಾಂಗ್ರೆಸ್ ತಯಾರು ಮಾಡ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ಮಾಜಿ ಶಾಸಕ ಎಸ್ಐ ಚಿಕ್ಕನಗೌಡ ಅವರನ್ನು ಪ್ರಹ್ಲಾದ್ ಜೋಶಿ ವಿರುದ್ಧ ಕಣಕ್ಕಿಳಿಸೋ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿವೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಂಬಂಧಿಯಾಗಿರೋ ಚಿಕ್ಕನಗೌಡರು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರಬಂದು ಸ್ಪರ್ಧಿಸಿ ಪರಾಭವಗೊಂಡಿದ್ದರು. ತಮಗೆ ಬಿಜೆಪಿ ಟಿಕೆಟ್ ತಪ್ಪಲು ಜೋಶಿ ಅವರೇ ಕಾರಣ ಎಂಬ ಸಿಟ್ಟು ಗೌಡರಿಗೆ ಇದೆ ಎಂದು ಹೇಳಲಾಗಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರು ಚಿಕ್ಕನಗೌಡರು ಕಾಂಗ್ರೆಸ್ ಸೇರ್ಪಡೆಯಾಗೋದಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ಪಂಚಮಸಾಲಿ ಸಮುದಾಯದ ಹಿರಿಯ ಮುಖಂಡನಾಗಿರುವ ಚಿಕ್ಕನಗೌಡರನ್ನು ಜೋಶಿ ವಿರುದ್ಧ ಕಣಕ್ಕಿಳಿಸುವ ಕುರಿತ ಚರ್ಚೆಗಳು ಕಾಂಗ್ರೆಸ್ ಮನೆಯಲ್ಲಿ ಶುರುವಾಗಿವೆ.
ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸೋದು ಖಚಿತ ಎಂದು ಎಸ್.ಐ.ಚಿಕ್ಕನಗೌಡ್ರ ಹೇಳಿದ್ದಾರೆ. ಆದ್ರೆ ಕ್ಷೇತ್ರ ಯಾವುದನ್ನು ಖಚಿತಪಡಿಸಿಲ್ಲ ಕುಂದಗೋಳ ಶಾಸಕ ಎಂ.ಆರ್.ಪಾಟೀಲ್ ಕಾರಣಕ್ಕೆ ಜೋಶಿ ಮತ್ತು ಚಿಕ್ಕನಗೌಡ್ರ ನಡುವೆ ಬಿರುಕು ಮೂಡಿದೆ.
ಪ್ರಹ್ಲಾದ್ ಜೋಶಿ ವಿರುದ್ಧ ಲಿಂಗಾಯತ ನಾಯಕರನ್ನೇ ಕಣಕ್ಕಿಳಿಸಲು ಮುಂದಾಗಿರುವ ಕಾಂಗ್ರೆಸ್ಗೆ ಮೊದಲು ಜಗದೀಶ್ ಶೆಟ್ಟರ್ ಕಾಣಿಸಿಕೊಂಡಿದ್ದರು. ಆದರೆ ಜಗದೀಶ್ ಶೆಟ್ಟರ್ ಚುನಾವಣೆಗೆ ಸ್ಪರ್ಧೆ ಮಾಡಲು ಹಿಂದೇಟು ಹಾಕಿದ ಕಾರಣ ಕೈ ಪಡೆ ಸೂಕ್ತ ಅಭ್ಯರ್ಥಿಗೆ ಹುಡುಕಾಟ ನಡೆಸಿದೆ .
ಇದೀಗ ಯಡಿಯೂರಪ್ಪ ಸಂಬಂಧಿಯಾಗಿರೋ ಚಿಕ್ಕನಗೌಡರನ್ನೇ ಅಖಾಡಕ್ಕಿಳಿಸಲು ಗಂಭೀರ ಚಿಂತನೆ ನಡೆಸಿದೆ