ಹುಬ್ಬಳ್ಳಿ : ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ನಿನ್ನೆ ನಡೆದ ಅಗ್ನಿ ಅವಘಡ ದುರ್ಘಟನೆಯಲ್ಲಿ ಕಾರ್ಮಿಕರ ಕುಟುಂಬಗಳು ಆಘಾತಕ್ಕೀಡಾಗಿರುವುದು ನೋವಿನ ಸಂಗತಿಯಾಗಿದೆ ಇದಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವದು ಎಂದು
ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.
ಹುಬ್ಬಳ್ಳಿ ಹೊರವಲಯದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಅಗ್ನಿ ಅವಘಡಕ್ಕೆ ಒಳಗಾದ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಕಾರ್ಖಾನೆಗಳನ್ನು ಮೂರು ದಿನಗಳೊಳಗೆ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.ನಿಯಮಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಲು ಸೂಚಿಸಲಾಗಿದೆ.
ಬೆಂಕಿ ಅವಘಡದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ. ಅದರಲ್ಲಿ ಮೂವರು ಮೃತ ಪಟ್ಟಿದ್ದಾರೆ ಮೃತರ ಕುಟುಂಬಕ್ಕೆ ಸರಕಾರ 5 ಲಕ್ಷ ರೂ.ಪರಿಹಾರ ನೀಡಲಿದೆ.
ಸರಿಯಾದ ಸಮಯಕ್ಕೆ ಪೊಲೀಸ ಇಲಾಖೆ ಸ್ಥಳಕ್ಕೆ ಬಂದು ಪರಿಸ್ಥಿತಿ ನಿಭಾಯಿಸಿದೆ. ಜಿಲ್ಲಾಡಳಿತವು ಉತ್ತಮ ಕಾರ್ಯಮಾಡಿದೆ ಎಂದರು
ಒಂದು ತಿಂಗಳ ಹಿಂದೆ ಕಾರ್ಖಾನೆ ಆರಂಭವಾಗಿತ್ತು. ಕಾನೂನಿನ ಪ್ರಕಾರ ಕಾರ್ಖಾನೆ ನಡೆಸಲು ಪರವಾನಿಗೆ ಪಡೆಯಬೇಕು. ಆದರೆ ಯಾವ ಇಲಾಖೆಯಲ್ಲಿಯೂ ಕಾರ್ಖಾನೆ ನೋಂದಣಿ ಮಾಡಿಕೊಂಡಿಲ್ಲ. ಅಧಿಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಕಾನೂನು ಬಾಹಿರವಾದ ಪರವಾನಿಗೆ ಹೊಂದಿರದ ಕಾರ್ಖಾನೆಗಳ ವಿರುದ್ದ ಕ್ರಮ ಜರುಗಿಸಲಾಗುವುದು. ಈ ಅವಘಡಕ್ಕೆ ಕಾರಣರಾದವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಅವರಿಗೆ ಶಿಕ್ಷೆ ವಿಧಿಸಲಾಗುವದು ಎಂದರು. ಕಾರ್ಖಾನೆಗಳು ಸುರಕ್ಷತೆಗೆ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು. ಮೃತರ ಕುಟುಂಬದ ಮಕ್ಕಳಿಗೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ
ನೆರವು ನೀಡಲಾಗುವದು ಎಂದು ತಿಳಿಸಿದರು.
ಸಚಿವರು ನಂತರ ಕಿಮ್ಸ್‌ಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ಸ್ಥಿತಿ ವಿಚಾರಿಸಿದರು.
ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೋಲಿಸ್ ಆಯುಕ್ತ ಲಾಭೂರಾಮ್, ಪೋಲಿಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ , ಹುಬ್ಬಳ್ಳಿ ನಗರ ತಹಶಿಲ್ದಾರ ಶಶಿಧರ್ ಮಾಡ್ಯಾಳ ಇತರರು ಉಪಸ್ಥಿತರಿದ್ದರು.