ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಈ ಬಾರಿ ನನ್ನ ಗೆಲುವು ಖಚಿತ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯ ನಾಲ್ಕು ತಿಂಗಳ ಪೂರ್ವದಲ್ಲೇ ಕಾಂಗ್ರೆಸ್ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಈ ಕಾರಣದಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಿಲ್ಲೆಯಲ್ಲಿನ ಮತದಾರರನ್ನು ಕುದ್ದಾಗಿ ಭೇಟಿಯಾಗಿದ್ದೇನೆ. ಎಲ್ಲ ಮತದಾರರು ಶಿಕ್ಷಣ ಇಲಾಖೆಯಲ್ಲಿನ ಸಮಸ್ಯೆಗಳಿಂದ ರೋಸಿ ಹೋಗಿದ್ದಾರೆ. ಈವರೆಗೆ ಶಿಕ್ಷಕರ ಸಮಸ್ಯೆಗಳು ಹಾಗೇ ಉಳಿದಿವೆ. ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಕ್ಷೇತ್ರದಲ್ಲಿ ನನ್ನ ಪರವಾದ ಒಲವು ಇದೆ. ಈ ಕಾರಣದಿಂದ ಶಿಕ್ಷಕರು ನನ್ನ ಗೆಲುವಿಗೆ ಮುನ್ನುಡಿ ಬರೆಯಲಿದ್ದಾರೆ ಎಂದರು.
ಗೆಲುವು ತಂದು ಕೊಡುವವರು ಮತದಾರರು, ಈ ದಿಸೆಯಲ್ಲಿ ಕಳೆದ 27 ವರ್ಷಗಳಿಂದ ಸಮಸ್ಯೆಗಳ ಸರಮಾಲೆ ಹಾಗೇ ಇದೆ. ಶಿಕ್ಷಕರು ಈ ಹಿಂದೆ ಆಯ್ಕೆಯಾದ ಅಭ್ಯರ್ಥಿ ಮೇಲೆ ನಂಬಿಕೆ ಇಟ್ಟು ಆರಿಸಿಕಳಿಸಿದ್ದರು. ಆದರೆ ಈ ಚುನಾವಣೆಯಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಸಮಸ್ಯೆಗಳನ್ನು ಇಟ್ಟುಕೊಂಡೇ ಮತ ಕೇಳುತ್ತಿದ್ದಾರೆ. ಇದು ವಿಷಾದನೀಯ. ಹೀಗಾಗಿ ಶಿಕ್ಷಕರು ನಾನು ಮಾಡಿದ ಶಿಕ್ಷಕರ ಸೇವೆಯನ್ನು ಗುರುತಿಸಿ ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅನಿಲಕುಮಾರ ಪಾಟೀಲ್, ಸದಾನಂದ ಡಂಗನವರ, ತಿಮ್ಮಯ್ಯ ಪುರ್ಲೇ, ಆನಂದ ಕುಲಕರ್ಣಿ, ಪ್ರಕಾಶ ಕ್ಯಾರಕಟ್ಟಿ ಸೇರಿದಂತೆ ಮುಂತಾದವರು ಇದ್ದರು.