ಹುಬ್ಬಳ್ಳಿ: ದಿ.ನಟ ಪುನೀತ್ ರಾಜಕುಮಾರ 47 ನೇ ಜನ್ಮದಿನದ ಹಿನ್ನೆಲೆಯಲ್ಲಿ ಅಪ್ಪು ಬೆಳಕು ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಮಾ.17 ರಂದು ಬೆಳಿಗ್ಗೆ 10 ಗಂಟೆಗೆ ಮೂರುಸಾವಿರಮಠದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ದಿ. ವರನಟ ಡಾ.ರಾಜ್ ಕುಮಾರ ಅವರು ನಿಧನ ನಂತರ ತಮ್ಮ ಕಣ್ಣು ದಾನ ಮಾಡುವ ಮೂಲಕ ಯುವಕರಿಗೆ ಸ್ಪೂರ್ತಿಯಾದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ರಾಜ್ ಕುಟುಂಬವು ಕೂಡಾ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಹುಬ್ಬಳ್ಳಿಯ ಜೊತೆಗೆ ಅವಿನಾಭಾವ ಸಂಬಂಧಹೊಂದಿದ್ದಾರೆ. ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರು ಸಿದ್ದಾರೂಢರ ಪರಮಭಕ್ತರಾಗಿದ್ದರು. ಅವರ ಅಕಾಲಿಕ ನಿಧನ ಪ್ರತಿಯೊಬ್ಬರಿಗೂ ಅತೀವವಾದ ದುಃಖ ತಂದಿದೆ. ಈ ದಿಸೆಯಲ್ಲಿ ನಟ ಪುನೀತ್ ಅವರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಅಪ್ಪು ಬೆಳಕು ಎಂಬ ನೇತ್ರದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಶಿಬಿರ ಹೊಸೂರಿನ ಎಮ್.ಎಮ್.ಜೋಶಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆಯಲಿದ್ದು, ಮೂರುಸಾವಿರಮಠದ ಶ್ರೀ ಹ
ಜಗದ್ಗುರು ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಲಿದ್ದು, ಚಿತ್ರನಟ ನಿಹಾಲ್ ತಮ್ಮ ನೇತ್ರವನ್ನು ದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಈ ಶಿಬಿರದಲ್ಲಿ ಹಲವಾರು ಸಂಘಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದು, ಸುಮಾರು ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿ ತಮ್ಮ ಕಣ್ಣುದಾನ ಮಾಡುವ ನಿರೀಕ್ಷೆ ಇದೆ ಎಂದು ರಜತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಡಾ.ಮಯೂರ ಮೋರೆ, ಸಮಾಜ ಸೇವಕಿ ಓಟಿಲೆ ಅನಬನ್ ಕುಮಾರೆ ಇದ್ದರು.